2019ರ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ ಸುಷ್ಮಾ ಸ್ವರಾಜ್
ಆರೋಗ್ಯ ಸ್ಥಿತಿ ಉತ್ತಮವಾಗಿಲ್ಲದ ಕಾರಣ ತಾವು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸುಷ್ಮಾ ತಿಳಿಸಿದ್ದಾರೆ.
ಇಂದೋರ್: 2019 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಇಂದೋರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಷ್ಮಾ ಈ ಹೇಳಿಕೆ ನೀದಿದ್ದಾರೆ. ಆರೋಗ್ಯದ ಸ್ಥಿತಿ ಉತ್ತಮವಾಗಿಲ್ಲದ ಕಾರಣ ತಾವು ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ಅವರು ಹೇಳಿದರು.
66 ವರ್ಷ ವಯಸ್ಸಿನವರಾದ ಸುಷ್ಮಾ ಸ್ವರಾಜ್ ಪ್ರಸ್ತುತ ಮಧ್ಯಪ್ರದೇಶದ ವಿದಿಶಾ ಕ್ಷೇತ್ರದ ಸಂಸದರಾಗಿದ್ದಾರೆ. ಮೂಲತಃ ಹರಿಯಾಣದ ಅಂಬಾಲಾ ಕ್ಯಾಂಟ್ ನವರಾದ ಸುಷ್ಮಾ ಸ್ವರಾಜ್ ಅವರು ವಕೀಲರರಾಗಿದ್ದರು, ಬಳಿಕ ರಾಜಕೀಯ ಪ್ರವೇಶಿಸಿದರು. ಅವರ ತಂದೆ RSSನ ಪ್ರಮುಖ ಸದಸ್ಯರಾಗಿದ್ದರು. ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಸುಷ್ಮಾ ಮಾಹಿತಿ ಪ್ರಸಾರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ಸುಷ್ಮಾ ಸ್ವರಾಜ್ ಸಂಸದೆಯಾಗಿ ಏಳು ಬಾರಿ ಮತ್ತು ವಿಧಾನ ಸಭಾ ಸದಸ್ಯೆಯಾಗಿ ಮೂರು ಬಾರಿ ಆಯ್ಕೆಯಾಗಿದ್ದಾರೆ. 1977ರಲ್ಲಿ 25 ನೇ ವಯಸ್ಸಿಗೆ, ಅವರು ಉತ್ತರ ಹರ್ಯಾಣಾ ರಾಜ್ಯದ ಅತ್ಯಂತ ಕಿರಿಯ ಸಂಪುಟ ಸಚಿವೆಯಾದರು. ಅವರು 1998 ರಲ್ಲಿ ಅಲ್ಪ ಅವಧಿಗೆ ದೆಹಲಿಯ 5ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಪ್ರಸ್ತುತ ಮೋದಿ ಸರಕಾರದಲ್ಲಿ, ಸುಷ್ಮಾ ಅವರು ವಿದೇಶಾಂಗ ಸಚಿವಾಲಯದಂತಹ ದೊಡ್ಡ ಹುದ್ದೆ ನಿರ್ವಹಿಸುತ್ತಿದ್ದಾರೆ.