ನವದೆಹಲಿ:  ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಇಡೀ ದೇಶದಲ್ಲಿ ಜಾರಿಯಾಗುವುದಿಲ್ಲ ಎಂದು  ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾದ ನಂತರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದರು. ಠಾಕ್ರೆ, ಮಗ ಆದಿತ್ಯ ಅವರೊಂದಿಗೆ ಪ್ರಧಾನಿ ಮೋದಿಯವರನ್ನು ರಾಷ್ಟ್ರ ರಾಜಧಾನಿಯಲ್ಲಿ ಭೇಟಿಯಾದರು ಮತ್ತು ಅಸ್ಸಾಂನಲ್ಲಿ ಮಾತ್ರ ಎನ್ಆರ್ಸಿ ಜಾರಿಗೆ ಬರಲಿದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.


COMMERCIAL BREAK
SCROLL TO CONTINUE READING

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ. ಎನ್‌ಪಿಆರ್ ಜನಗಣತಿ ಎಂದು ಹೇಳಿದರು. "ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಯಾರನ್ನೂ ದೇಶದಿಂದ ಹೊರಗೆ ಹಾಕಲು ಹೋಗುವುದಿಲ್ಲ" ಎಂದು ಠಾಕ್ರೆ ಸ್ಪಷ್ಟಪಡಿಸಿದ್ದಾರೆ.


"ಮಹಾರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರಧಾನ ಮಂತ್ರಿಯೊಂದಿಗೆ ಉತ್ತಮ ಚರ್ಚೆ ನಡೆಸಿದ್ದೇನೆ". ಮಹಾರಾಷ್ಟ್ರ ಸರ್ಕಾರಕ್ಕೆ ಎಲ್ಲ ಸಹಕಾರ ನೀಡುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ ಎಂದು ಮಹಾರಾಷ್ಟ್ರ ಸಿಎಂ ಠಾಕ್ರೆ ಹೇಳಿದರು.


ಉದ್ಧವ್ ಠಾಕ್ರೆ ತಾವು ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ ಬಳಿಕ ಇದೇ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡಿದರು. ಫೆಬ್ರವರಿ 24 ರಂದು ಪ್ರಾರಂಭವಾಗಲಿರುವ ಮಹಾರಾಷ್ಟ್ರದ ವಿಧಾನಸಭೆ ಅಧಿವೇಶನಕ್ಕೆ ಮುಂಚಿತವಾಗಿ ಉದ್ಧವ್ ಮತ್ತು ಮೋದಿ ನಡುವಿನ ಈ ಸಭೆ ಮಹತ್ವಪೂರ್ಣದ್ದಾಗಿದೆ.


ಮಹಾರಾಷ್ಟ್ರದ ಸರ್ಕಾರವು ಸಾಮಾನ್ಯ ಕನಿಷ್ಠ ಕಾರ್ಯಕ್ರಮ (ಸಿಎಂಪಿ) ಅಡಿಯಲ್ಲಿ ನಡೆಯಲಿದೆ. "ಜಿಎಸ್ಟಿ ಹಣವನ್ನು ಕೇಂದ್ರವು ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ನೀಡಬೇಕೆಂದು ನಾವು ಬಯಸುತ್ತೇವೆ. ಸಿಎಎ ಮತ್ತು ಎನ್ಪಿಆರ್ ಬಗ್ಗೆ ಕಾಂಗ್ರೆಸ್ ಜೊತೆ ಮಾತನಾಡುತ್ತೇವೆ" ಎಂದು ಸಿಎಂ ಠಾಕ್ರೆ ಹೇಳಿದರು.


"ಮಹಾರಾಷ್ಟ್ರದ ಮುಖ್ಯಮಂತ್ರಿ, ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ಸರ್ಕಾರದ ಸಚಿವ ಆದಿತ್ಯ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ" ಎಂದು ಪ್ರಧಾನಿ ಕಚೇರಿ (ಪಿಎಂಒ) ಟ್ವೀಟ್ ಮಾಡಿದೆ. ಪಿಎಂಒ ಹಂಚಿಕೊಂಡ ಚಿತ್ರಗಳಲ್ಲಿ, ಉದ್ಧವ್ ಮತ್ತು ಅವರ ಪುತ್ರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸುತ್ತಿರುವುದನ್ನು ಕಾಣಬಹುದು.


ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಸೌಹಾರ್ದಯುತ ಸಂಬಂಧ ಹೊಂದಿದ್ದಾರೆ ಎಂದು ಹಿಂದಿನ ದಿನ ಶಿವಸೇನೆ ಮುಖಂಡ ಸಂಜಯ್ ರೌತ್ ಹೇಳಿದ್ದಾರೆ. "ಹಿರಿಯ ಸಹೋದರ ಮತ್ತು ಕಿರಿಯ ಸಹೋದರನ ಸಂಬಂಧವು ಅವರ ನಡುವೆ ಮುಂದುವರಿಯುತ್ತದೆ" ಎಂದು ಅವರು ಹೇಳಿದರು.