ಗಲ್ವಾನ್ ನಿಂದ ಸೇನೆ ಹಿಂದಕ್ಕೆ ಕರೆಯಿಸಿಕೊಂಡ ಚೀನಾದ ವಿದೇಶಾಂಗ ಸಚಿವರಿಗೆ Ajit Doval ಹೇಳಿದ್ದಾದರೂ ಏನು?
ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೇನೆಯು ಸುಮಾರು 2 ಕಿ.ಮೀ ಹಿಂದಕ್ಕೆ ಸರೆದಿದೆ. ಆದರೆ ಇದುವರೆಗೆ ಈ ಕುರಿತು ಸೇನೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಏತನ್ಮಧ್ಯೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ಭಾನುವಾರ ದೂರವಾಣಿ ಸಂಭಾಷಣೆ ನಡೆಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ನವದೆಹಲಿ: ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೇನೆಯು ಸುಮಾರು 2 ಕಿ.ಮೀ ಹಿಂದಕ್ಕೆ ಸರೆದಿದೆ. ಆದರೆ ಇದುವರೆಗೆ ಈ ಕುರಿತು ಸೇನೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಏತನ್ಮಧ್ಯೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ಭಾನುವಾರ ದೂರವಾಣಿ ಸಂಭಾಷಣೆ ನಡೆಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಮಾತುಕತೆಯ ಸಂದರ್ಭದಲ್ಲಿ, ಇಂಡೋ-ಚೀನಾ ಗಡಿ ಪ್ರದೇಶಗಳ ಪಶ್ಚಿಮ ವಲಯದಲ್ಲಿ ಇತ್ತೀಚೆಗೆ ನಡೆದ ವಿವಾದವನ್ನು ಇಬ್ಬರೂ ಆಳವಾಗಿ ಮತ್ತು ಬಹಿರಂಗವಾಗಿ ಚರ್ಚಿಸಿದ್ದಾರೆ ಎಂದು ಇಲಾಖೆ ಹೇಳಿದೆ.
ಈ ಕುರಿತು ಹೇಳಿಕೆ ನೀಡಿರುವ ವಿದೇಶಾಂಗ ಇಲಾಖೆ, ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಉದ್ಭವಿಸಿರುವ ಬಿಕ್ಕಟ್ಟನ್ನು ಶಮನಗೊಳಿಸಲು ಉಭಯ ದೇಶಗಳು ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂಬುದಕ್ಕೆ ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದ್ದಾರೆ ಎಂದಿದೆ. ಅಷ್ಟೇ ಅಲ್ಲ ಭಾರತ-ಚೀನಾ ಗಡಿ ವಿವಾದಕ್ಕೆ ಸಂಬಂಧಿಸದಂತೆ ದ್ವಿಪಕ್ಷೀಯ ಒಪ್ಪಂದಗಳು ಹಾಗೂ ನಿಯಮಾವಳಿಗಳ ಅಡಿಯಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಮರುಸ್ಥಾಪಿಸಲು NSA ಅಜೀತ್ ಡೋಭಾಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಇ ನಡುವೆ ಮಾತುಕತೆ ಮುಂದೆಯೂ ಕೂಡ ಮುಂದುವರೆಯಲಿದೆ ಎಂದು ಸಚಿವಾಲಯ ಹೇಳಿದೆ.
ಈ ಮಾತುಕತೆಯ ವೇಳೆ ವಾಸ್ತವಿಕ ನಿಯಂತ್ರಣ ರೇಖೆಯನ್ನು ಉಭಯ ದೇಶದವರು ಗೌರವಿಸಬೇಕು ಮತ್ತು ಪರಿಸ್ಥಿತಿಯನ್ನು ಬದಲಾಯಿಸಲು ಏಕಪಕ್ಷೀಯ ಕ್ರಮ ಕೈಗೊಳ್ಳಬಾರದು. ಅಲ್ಲದೆ ಗಡಿ ಭಾಗಗಳಲ್ಲಿ ಶಾಂತಿ ಮತ್ತು ಸುವವಸ್ಥೆಗೆ ಧಕ್ಕೆ ಬರುವ ಯಾವುದೇ ಭವಿಷ್ಯದ ಘಟನೆಗಳನ್ನು ನಿರ್ಲಕ್ಷಿಸಬೇಕು ಎಂಬುದಕ್ಕೆ ಉಭಯ ಕಡೆಯವರು ಸಮ್ಮತಿ ಸೂಚಿಸಿದ್ದಾರೆ ಎಂದು ಸಚಿವಾಲಯ ಹೇಳಿದೆ.
ಎರಡು ಸುತ್ತಿನ ಮಾತುಕತೆಯಲ್ಲಿ ಒಮ್ಮತ ಮೂಡಿದೆ ಎಂದ ಚೀನಾ
ಈ ಕುರಿತು ಮಾಹಿತಿ ನೀಡಿರುವ ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಝಾವೋ ಲಿಜಿಯಾನ್, "ಭಾರತ ಹಾಗೂ ಚೀನಾ ಸೈನಿಕರ ಮಧ್ಯೆ ಜೂನ್ 30ಕ್ಕೆ ಕಮಾಂಡರ್ ಗಳ ಮಟ್ಟದ ಮಾತುಕತೆ ನಡೆದಿದೆ. ಒಟ್ಟು ಎರಡು ಸುತ್ತುಗಳಲ್ಲಿ ನಡೆದ ಈ ಮಾತುಕತೆಯ ಬಳಿಕ ಎರಡು ಕಡೆಯಿಂದ ಒಮ್ಮತಕ್ಕೆ ಬರಲಾಗಿದೆ." ಎಂದಿದ್ದಾರೆ. ಈ ವೇಳೆ ಭಾರತೀಯ ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಗಳ ಕುರಿತು ಪ್ರಶ್ನಿಸಲಾಗಿದ್ದು, ವರದಿಗಳಲ್ಲಿ ಚೀನಾ ಸೈನಿಕರು ಹಿಂದೆ ಸರೆದಿದ್ದಾರೆ ಎನ್ನಲಾಗಿತ್ತು.
ಇದಕ್ಕೆ ಉತ್ತರಿಸಿದ್ದ ಝಾವೋ, "ಮುಂಚೂಣಿಯಲ್ಲಿರುವ ಸೈನ್ಯಗಳು ಈ ನಿಟ್ಟಿನಲ್ಲಿ ಪ್ರಗತಿ ಸಾಧಿಸಿದ್ದು, ಉದ್ವಿಗ್ನತೆ ಮತ್ತು ಬಿಕ್ಕಟ್ಟನ್ನು ಶಮನಗೊಳಿಸಲು ಪರಿಣಾಮಕಾರಿ ಹೆಜ್ಜೆಗಳನ್ನು ಇಡಲಾಗುತ್ತಿದೆ. ಗಡಿ ಪ್ರದೇಶದಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತ ಮುಂದೆ ಬರಲಿದ್ದು, ಸೂಕ್ತ ಕ್ರಮಗಳ ಮಾಧ್ಯಮದ ಮೂಲಕ ಒಮ್ಮತ ಮೂಡಲಿದೆ ಹಾಗೂ ಗಡಿಭಾಗದಲ್ಲಿ ಉದ್ವಿಗ್ನತೆ ಕಡಿಮೆ ಮಾಡಲು ಸೇನಾ ಮಟ್ಟದ ಹಾಗೂ ರಾಜತಾಂತ್ರಿಕ ಮಟ್ಟದ ಮಾತುಕತೆಗಳನ್ನು ಮುಂದುವರೆಸಲಿದೆ ಎಂದು ನಾವು ಭಾವಿಸುತ್ತೇವೆ" ಎಂದಿದ್ದಾರೆ. ಚೀನಾ ಸೇನೆ ಗಲ್ವಾನ್ ವಿವಾದಿತ ಪ್ರದೇಶದಿಂದ 1.5 ರಿಂದ 2 ಕಿ.ಮೀ ಹಿಂದೆ ಸರೆದಿದೆ ಎಂಬ ವರದಿಗಳು ಭಾರತೀಯ ಮಾಧ್ಯಮಗಳಲ್ಲಿ ಪ್ರಕಟಗೊಂಡ ಕೆಲವೇ ಗಂಟೆಗಳಲ್ಲಿ ಒಳಗೆ ಚೀನಾದಿಂದ ಈ ಪ್ರತಿಕ್ರಿಯೆ ಬಂದಿದೆ.