ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಆದೇಶದ ಮೇರೆಗೆ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ನೇತೃತ್ವದ ಹಿಂದಿನ ಟಿಡಿಪಿ ಸರ್ಕಾರದ ಅವಧಿಯಲ್ಲಿ ನಿರ್ಮಿಸಲಾಗಿದ್ದ ಪ್ರಜಾವೇದಿಕೆ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ. 


COMMERCIAL BREAK
SCROLL TO CONTINUE READING

ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ತಮ್ಮ ಮನೆಯ ಪಕ್ಕ ಕಟ್ಟಿಸಿಕೊಂಡಿದ್ದ ಪ್ರಜಾವೇದಿಕೆ ಕಟ್ಟಡವನ್ನು ಅಕ್ರಮವಾಗಿ ಕಟ್ಟಲಾಗಿದೆ ಎಂದು ಆರೋಪಿಸಿ ಅದನ್ನು ನೆಲಸಮ ಮಾಡುವಂತೆ ಸಿಎಂ ಜಗನ್ ಮೋಹನ್ ರೆಡ್ಡಿ ಸೋಮವಾರ ಆದೇಶಿಸಿದ್ದರು.


ಸೋಮವಾರ ಪ್ರಜಾವೇದಿಕೆ ಕಟ್ಟಡದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಸಿಎಂ ಜಗನ್ ಮೋಹನ್ ರೆಡ್ಡಿ, "ನಾವು ಈ ಸಭೆಯನ್ನು ನಡೆಸುತ್ತಿರುವ ಕಟ್ಟಡವನ್ನು ನಿಯಮಗಳನ್ನು ಉಲ್ಲಂಘಿಸಿ, ಕಾನೂನುಬಾಹಿರವಾಗಿ ನಿರ್ಮಿಸಲಾಗಿದೆ. ಈ ಕಟ್ಟಡದಲ್ಲಿ ನಡೆಯುತ್ತಿರುವ ಕೊನೆಯ ಅಧಿಕೃತ ಸಭೆ ಇದಾಗಿದ್ದು, ಹಿಂದಿನ ಸರ್ಕಾರ ಕಾನೂನುಬಾಹಿರವಾಗಿ, ನಿಯಮಗಳನ್ನು ಗಾಳಿಗೆ ತೂರಿ ನಿರ್ಮಿಸಿರುವ ಈ ಕಟ್ಟಡವನ್ನು ನೆಲಸಮಗೊಳಿಸುವ ಕೆಲಸ ಒಂದೆರಡು ದಿನಗಳಲ್ಲಿ ನಡೆಯಲಿದೆ" ಎಂದಿದ್ದರು.


"ನಾವು ಪ್ರತಿ ಇಲಾಖೆಯಲ್ಲೂ ಪಾರದರ್ಶಕತೆಯನ್ನು ತರುತ್ತೇವೆ, ಚಂದ್ರಬಾಬು ನಾಯ್ಡು ಮತ್ತು ತೆಲುಗು ದೇಶಂ ಪಕ್ಷದ ಸರ್ಕಾರದ ಎಲ್ಲಾ ದುಷ್ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ" ಎಂದು ಜಗನ್ ಈ ಹಿಂದೆ ವಾಗ್ದಾಳಿ ನಡೆಸಿದ್ದರು.


ಮಾಜಿ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಹಿಂದಿನ ಟಿಡಿಪಿ ಸರ್ಕಾರವು ಕೃಷ್ಣ ನದಿಯ ದಡದಲ್ಲಿರುವ ಅವರ ನಿವಾಸದ ಸಮೀಪದಲ್ಲಿ ಪ್ರಜಾ ವೇದಿಕೆ ಕಟ್ಟಡವನ್ನು 2015 ರಲ್ಲಿ ಅಂದಾಜು 10 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಕ್ಕೆ ಆದೇಶಿಸಿತ್ತು. ಇಂದು(ಬುಧವಾರ) ಬೆಳಿಗ್ಗೆ, ಜೆಸಿಬಿ ಯಂತ್ರಗಳು ಈ ಕಟ್ಟಡವನ್ನು ಧರೆಗುರುಳಿಸುವ ಕಾರ್ಯವನ್ನು ನಡೆಸುತ್ತಿವೆ.



2019 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ನಂತರ ಜಗನ್ ಹಿಂದಿನ ರಾಜ್ಯ ಸರ್ಕಾರದ ಹಲವು ನಿರ್ಧಾರಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ. "ಮುಖ್ಯಮಂತ್ರಿ ಇಲ್ಲಿ ಪ್ರತೀಕಾರ ರಾಜಕಾರಣವನ್ನು ಅನುಸರಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಟಿಡಿಪಿ ಸರ್ಕಾರವು ನಿರ್ಮಿಸಿದ ಕಾರಣಕ್ಕಾಗಿ ಅವರು ಕಟ್ಟಡವನ್ನು ಏಕೆ ನೆಲಸಮ ಮಾಡಬೇಕು? ಬದಲಿಗೆ, ಅವರು ಅದನ್ನು ಬಳಸಲು ಬಯಸದಿದ್ದರೆ, ಈ ಕಟ್ಟಡವನ್ನು ಸರ್ಕಾರದ ಇತರೆ ಸೌಲಭ್ಯಗಳಿಗಾಗಿ ಪರಿವರ್ತಿಸಬಹುದು ಎಂದು ಟಿಡಿಪಿ ಎಂಎಲ್ಸಿ ಬುದ್ಧ ವೆಂಕಣ್ಣ ಈ ಹಿಂದೆ ಹೇಳಿದ್ದರು.