ನವದೆಹಲಿ: ಭಾರತದಾದ್ಯಂತ ಏಕಕಾಲದಲ್ಲಿ ಚುನಾವಣೆಗಳನ್ನು ಜಾರಿಗೆ ತರುವ ಪ್ರಧಾನಿ ನರೇಂದ್ರ ಮೋದಿಯವರ ನಿಲುವನ್ನು ಬೆಂಬಲಿಸಿದ ಶಿವಸೇನೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಿರುವುದನ್ನು ಶ್ಲಾಘಿಸಿದೆ.


COMMERCIAL BREAK
SCROLL TO CONTINUE READING

ಪ್ರಧಾನಿ ಮೋದಿ 'ಒಂದು ರಾಷ್ಟ್ರ-ಒಂದು ಚುನಾವಣೆ' ಯೋಜನೆಯನ್ನು ಸೂಚಿಸಿರುವುದರಿಂದ, ಮುಂದಿನ ದಿನಗಳಲ್ಲಿ ಈ ನೀತಿ ಶೀಘ್ರದಲ್ಲೇ ವಾಸ್ತವವಾಗುವುದು ನಿಶ್ಚಿತ ಎಂದು ಶಿವಸೇನೆ ಹೇಳಿದೆ. 


ಆಗಸ್ಟ್ 15 ರಂದು ಕೆಂಪುಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ನೀಡಿದ ಭಾಷಣದಲ್ಲಿ ಪ್ರಧಾನಿ ಮೋದಿ 'ಒಂದು ರಾಷ್ಟ್ರ-ಒಂದು ಚುನಾವಣೆಗೆ' ವಿಚಾರವಾಗಿ ಪ್ರಸ್ತಾಪಿಸಿದ್ದರು, ಜಮ್ಮು ಕಾಶ್ಮೀರಕ್ಕೆ ಇದ್ದ 370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವುದನ್ನು 'ಒಂದು ರಾಷ್ಟ್ರ-ಒಂದು ಸಂವಿಧಾನ'ದತ್ತ ಹೆಜ್ಜೆಯಾದರೆ, ಜಿಎಸ್ಟಿ ಒಂದು ರಾಷ್ಟ್ರ-ಒಂದು ಕಾನೂನು' ಸಾಧಿಸುವತ್ತ ಕ್ರಮ ಎಂದು ಹೇಳಿದರು.


ಇದೇ ವೇಳೆ ಶಿವಸೇನಾ ಮುಖವಾಣಿ ಸಾಮ್ನಾ ತನ್ನ ಸಂಪಾದಕೀಯದಲ್ಲಿ ಪ್ರಧಾನಿ ಮೋದಿಯವರ ಭಾಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸರ್ಕಾರ ಎದುರಿಸುತ್ತಿರುವ ಸವಾಲುಗಳು ಮತ್ತು ಅವುಗಳ ಪರಿಹಾರಗಳನ್ನು ಜನರಿಗೆ ತಿಳಿಸಲು ಪ್ರಧಾನಿ ಮೋದಿ ಭಾಷಣವನ್ನು ವೇದಿಕೆಗಳನ್ನಾಗಿ ಬಳಸುತ್ತಾರೆ ಎಂದು ಹೇಳಿದೆ. ಸರ್ಕಾರ ಪರಿಚಯಿಸಿದ ಕಲ್ಯಾಣ ಯೋಜನೆಗಳನ್ನು ಪ್ರಧಾನಿ ಘೋಷಿಸುತ್ತಾರೆ ಮತ್ತು ಅವರ ಮುಂದಿನ ಕಾರ್ಯಸೂಚಿಗಳ ಬಗ್ಗೆ ಸೂಚನೆಗಳನ್ನು ನೀಡಲು ಮಾಧ್ಯಮವನ್ನು ಬಳಸುತ್ತಾರೆ ಎಂದು ಸಂಪಾದಕೀಯ ತಿಳಿಸಿದೆ.


ಕಲಂ 370, ತ್ರಿವಳಿ ತಲಾಖ್, ಶುದ್ಧ ಕುಡಿಯುವ ನೀರು, ಜನಸಂಖ್ಯೆ ನಿಯಂತ್ರಣ ಮತ್ತು ಅವರ ನೆಚ್ಚಿನ ವಿಷಯ ಒಂದು ರಾಷ್ಟ್ರ-ಒಂದು ಚುನಾವಣೆ" ಕುರಿತಾಗಿ ವಿಶೇಷ ಸಂದೇಶ ನೀಡುವ ಅವಕಾಶವನ್ನು ಪ್ರಧಾನಿ ಬಳಸಿಕೊಂಡರು ಎಂದು ಶಿವಸೇನೆ ಹೇಳಿದೆ. ಪಿಎಂ ಮೋದಿಯವರು ಪ್ರಸ್ತಾಪಿಸಿರುವ ಈ ಎಲ್ಲಾ ಯೋಜನೆಗಳು ಮುಂದಿನ ದಿನಗಳಲ್ಲಿ ಜಾರಿಗೆ ಬರುವುದರಲ್ಲಿ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದೆ.