ನವದೆಹಲಿ: ನೌಕರಿಗಳಿಗೆ ಸಂಬಂಧಿಸಿದಂತೆ ಸರ್ಕಾರದ ಚಟುವಟಿಕೆಗಳು ತೀವ್ರಗೊಂಡಿವೆ. ಲಾಕ್ ಡೌನ್ ಹಿನ್ನೆಲೆ ಹಲವು ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆಯಲ್ಲಿಯೂ ಕೂಡ ಏರಿಕೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಕಾರ್ಮಿಕ ಸಚಿವಾಲಯ ಲಾಕ್ ಡೌನ್ ಮಧ್ಯೆಯೇ ರಾಷ್ಟ್ರೀಯ ವೃತ್ತಿ ಸೇವಾ ಯೋಜನೆ (NCS) ಅಡಿಯಲ್ಲಿ 76 ಆನ್ಲೈನ್ ಉದ್ಯೋಗ ಮೇಳಗಳನ್ನು ನಡೆಸಿ ಇದುವರೆಗೆ ಒಟ್ಟು 73 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ಹೇಳಿದೆ, ಅಷ್ಟೇ ಅಲ್ಲ ಇಂತಹ ಹಲವು ಮೇಳಗಳನ್ನು  ನಡೆಸಲು ಯೋಜನೆ ಕೂಡ ರೂಪಿಸಲಾಗಿದೆ ಎಂದು ಹೇಳಿದೆ.


COMMERCIAL BREAK
SCROLL TO CONTINUE READING

ಇದೇ ವೇಳೆ ಜನರಲ್ಲಿನ ಪ್ರತಿಭೆಯನ್ನು ಗುರುತಿಸಿ ಅವರ ಪ್ರತಿಭೆಯನ್ನು ಇನ್ನಷ್ಟು ಸುಧಾರಿಸಲು ಅವಕಾಶ ಕಲ್ಪಿಸಿ ಅವರಿಗೆ ಉದ್ಯೋಗ ಕಲ್ಪಿಸುವ ಕೆಲಸ ಕೂಡ ಮಾಡಲಾಗುವುದು ಮತ್ತು ಸಚಿವಾಲಯ ಇದಕ್ಕಾಗಿ TCS ಕಂಪನಿಯ ಜೊತೆಗೆ ಕೈಜೋಡಿಸಿ ಆನ್ಲೈನ್ ಕರಿಯರ್ ಸ್ಕಿಲ್ ಟ್ರೇನಿಂಗ ಆರಂಭಿಸುತ್ತಿದೆ ಎಂದು ಹೇಳಿದೆ.


ಇದರ ಮೂಲಕ ವಿವಿಧ ಉದ್ಯಮಗಳ ಬೇಡಿಕೆಗೆ ಅನುಗುಣವಾಗಿ ಜನರಿಗೆ ತರಬೇತಿ ನೀಡಲಾಗುವುದು ಎಂದು ಹೇಳಿರುವ ಸಚಿವಾಲಯ, ಇದರಲ್ಲಿ ವ್ಯಕ್ತಿತ್ವ ಅಭಿವೃದ್ಧಿ, ಸಾಂಸ್ಥಿಕ ಶಿಷ್ಟಾಚಾರ, ಪ್ರಸ್ತುತಿ ಕೌಶಲ್ಯಗಳನ್ನೂ ಹೇಳಿಕೊಡಲಾಗುವುದು. ಈ ಕೋರ್ಸ್ ಗಳು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲಭ್ಯವಿರಲಿವೆ. www.ncs.gov.in ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ ಎಂದು ಸಚಿವಾಲಯ ಹೇಳಿದೆ.


ಅಂಕಿ-ಅಂಶಗಳ ಪ್ರಕಾರ ಸದ್ಯ ದೇಶಾದ್ಯಂತ ಸುಮಾರು 1 ಕೋಟಿ ಜನ ಸಕ್ರೀಯ ಉದ್ಯೋಗಾಕಾಂಕ್ಷಿಗಳಿದ್ದಾರೆ. ಇವರಲ್ಲಿ 54 ಸಾವಿರ ಜನರು NCS ನಲ್ಲಿ ತಮ್ಮ ಹೆಸರು ನೊಂದಾಯಿಸಿದ್ದಾರೆ. ಇನ್ನೊಂದೆಡೆ ದೇಶಾದ್ಯಂತ ಒಟ್ಟು 1000 ಎಂಪ್ಲಾಯ್ಮೆಂಟ್ ಎಕ್ಸ್ ಚೇಂಜ್ ಗಳಿವೆ.


ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಹೇಳುವ ಪ್ರಕಾರ ಉದ್ಯೋಗಾಕಾಂಕ್ಷಿಗಳ ವಿಡಿಯೋ ಪ್ರೊಫೈಲ್ ತಯಾರಿಸುವ ಕಾರ್ಯ ಕೂಡ ಪ್ರಗತಿಯಲ್ಲಿದ್ದು, ಉದ್ಯೋಗದಾತರು ಆನ್ಲೈನ್ ಮೂಲಕವೇ ಅವರ ಕೆಲಸದ ದರ್ಜೆಯನ್ನು ಪರಿಶೀಲಿಸಬಹುದು. ಇದಕ್ಕಾಗಿ HIREMEE ಪ್ಲಾಟ್ ಫಾರ್ಮ್ ಜೊತೆಗೆ ಪಾರ್ಟ್ನರ್ ಶಿಪ್ ಮಾಡಲಾಗಿದೆ ನ್ಯಾಷನಲ್ ಕರಿಯರ್ ಸರ್ವಿಸ್ ಅಡಿ ಎಲ್ಲ ಕೆಲಸಗಳನ್ನು ಉಚಿತವಾಗಿ ಮಾಡಲಾಗುತ್ತಿದೆ. ಅಂದರೆ ತರಬೇತಿ, ವೋಕೆಶನಲ್ ಕೋರ್ಸ್ ಮಾಡಿಸುವುದು, ಜಾಬ್ ಲಿಂಕ್ಸ್ ಒದಗಿಸುವುದು, ವಿಡಿಯೋ ಪ್ರೊಫೈಲ್ ತಯಾರಿಸುವಂತಹ ಎಲ್ಲ ಕೆಲಸಗಳಿಗೆ ಯಾವುದೇ ರೀತಿಯ ಶುಲ್ಕ ಪಡೆಯಲಾಗುತ್ತಿಲ್ಲ. ಹೀಗಾಗಿ ಯಾರಿಗಾದರು ಉದ್ಯೋಗ ಬೇಕಾದಲ್ಲಿ NCS ಪೋರ್ಟಲ್ ನಲ್ಲಿ ಅವರು ತಮ್ಮ ಪ್ರೊಫೈಲ್ ದಾಖಲಿಸಬೇಕು ಎಂದು ಇಲಾಖೆ ಹೇಳಿದೆ. 


ಇತ್ತ ಇನ್ನೊಂದೆಡೆ ಕೇಂದ್ರ ಹಣಕಾಸು ಸಚಿವಾಲಯ ಕೂಡ ಲಾಕ್ ಡೌನ್ ನಿಂದ ನೌಕರಿ ಕಳೆದುಕೊಂಡವರ, ವೇತನ ಕಡಿತಗೊಂಡವರ ಅಂಕಿ-ಅಂಶಗಳನ್ನು ಸಂಗ್ರಹಿಸುವಲ್ಲಿ ತೊಡಗಿದೆ. ಇದಕ್ಕಾಗಿ ಕಾರ್ಮಿಕ ಇಲಾಖೆಯಿಂದ ಸಚಿವಾಲಯ ದತ್ತಾಂಶಗಳನ್ನು ಹಂಚಿಕೊಳ್ಳಲು ಸೂಚನೆ ನೀಡಿದೆ.