ಬೆಂಗಳೂರು: ಆಮ್ ಆದ್ಮಿ ಪಕ್ಷ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲಿದ್ದು ನಾವು ಜಾತಿ ಆಧಾರದ ಮೇಲೆ ರಾಜಕಾರಣ ಮಾಡುವುದಿಲ್ಲ ಕಾಯಕದ ಮೇಲೆ ರಾಜಕಾರಣ ಮಾಡುತ್ತೇವೆ ಎಂದು ದೆಹಲಿ ಉಪ ಮುಖ್ಯಮಂತ್ರಿ, ಶಿಕ್ಷಣ ಸಚಿವ ಮನೀಷ್ ಸಿಸೋಡಿಯಾ ಹೇಳಿದರು.


COMMERCIAL BREAK
SCROLL TO CONTINUE READING

ಇಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಶಾಂತಿನಗರದ ಬಸಪ್ಪ ರಸ್ತೆಯ ಆಮ್ ಆದ್ಮಿ ಕ್ಲಿನಿಕ್ ವೀಕ್ಷಿಸಿದ ನಂತರ ಮಾಧ್ಯಮದವರೊಂದಿಗೆ ಸಂವಾದ ನಡೆಸಿ ಮಾತನಾಡಿದರು.


 ಬೆಂಗಳೂರಿನಲ್ಲಿ ಅಧಿಕಾರದಲ್ಲಿ ಇಲ್ಲದಿದ್ದರೂ ನಮ್ಮ ಸ್ವಯಂ ಸೇವಕರು ಸೇರಿ ಈ ಉಚಿತ ಕ್ಲಿನಿಕ್ ಪ್ರಾರಂಭಿಸಿದ್ದಾರೆ. ಬಿಬಿಎಂಪಿಯಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ವಾರ್ಡ್ ಗೆ 3 ಕ್ಲಿನಿಕ್ ತೆರೆಯಲಾಗುವುದು ಎಂದರು.


ಬಿಬಿಎಂಪಿ ಅಧಿಕಾರ ಅನುಭವಿಸಿದ ಮೂರು ಪಕ್ಷಗಳು ಬೆಂಗಳೂರಿನ ಜನತೆಗೆ ನಯಾಪೈಸೆ ಅನುಕೂಲ ಮಾಡಿಲ್ಲ. ನಾವು ಅಧಿಕಾರಕ್ಕೆ ಬರುವ ವಿಶ್ವಾಸವಿದ್ದು  ಬೆಂಗಳೂರಿನ ಚಿತ್ರಣವನ್ನೇ ಬದಲಾಯಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಮಾತನಾಡಿ, ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯಗಳನ್ನು ನೀಡದ ಸರ್ಕಾರ ಜನರಿಗೆ ಬೇಕಿಲ್ಲ. ನಾವು ನಡೆಸಿದ ಸಮೀಕ್ಷೆಯ ಪ್ರಕಾರ ಬೆಂಗಳೂರಿನ ಶೇ 70ರಷ್ಟು ಜನ ದೆಹಲಿ ಮಾದರಿ ಆಮ್ ಆದ್ಮಿ ಸರ್ಕಾರ ಬೆಂಗಳೂರಿಗೆ ಬೇಕು ಎಂದು ಅಭಿಪ್ರಾಯ ತಿಳಿಸಿದ್ದಾರೆ, ಇದು ನಿಜವಾಗಲಿದೆ ಎಂದು ಹೇಳಿದರು.


ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ, ಆಮ್ ಆದ್ಮಿ ಕ್ಲಿನಿಕ್ ಉಸ್ತುವಾರಿ ರಾಣಿ ದೇಸಾಯಿ, ರಾಜ್ಯ ಕಾರ್ಯದರ್ಶಿ ಸಂಚಿತ್ ಸಹಾನಿ, ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ಉಪಾಧ್ಯಕ್ಷ ಸುರೇಶ್ ರಾಥೋಡ್ ಇದ್ದರು.