ಉತ್ತರ ಪ್ರದೇಶ: ದೇವಸ್ಥಾನದಲ್ಲಿ ನೀಡಿದ ಹಾಲು ಕುಡಿದು 12 ಮಕ್ಕಳು ಅಸ್ವಸ್ಥ
ಅಸ್ವಸ್ಥಗೊಂಡ ಮಕ್ಕಳಲ್ಲಿ ಹಲವು ಚಿಕ್ಕ ಮಕ್ಕಳೂ ಸೇರಿದ್ದು, ಎಲ್ಲಾ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾಪುರ್(ಉತ್ತರಪ್ರದೇಶ): ಇಂದರ್‌ಗರ್ಹಿಯ ದೇವಸ್ಥಾನವೊಂದರಲ್ಲಿ ಕಳೆದ ರಾತ್ರಿ `ಸಾವನ್ ಶಿವರಾತ್ರಿ'ಯ ಸಂದರ್ಭದಲ್ಲಿ ಹಾಲನ್ನು ವಿತರಿಸಿದ್ದು, ಆ ಹಾಲು ಸೇವಿಸಿದ 12 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದಾರೆ.
ಅಸ್ವಸ್ಥಗೊಂಡ ಮಕ್ಕಳಲ್ಲಿ ಹಲವು ಚಿಕ್ಕ ಮಕ್ಕಳೂ ಸೇರಿದ್ದು, ಎಲ್ಲಾ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ಮಕ್ಕಳು ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ.
ಹಾಪುರ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಜೈನಾಥ ಯಾದವ್ (ಎಸ್‌ಡಿಎಂ), "ದುರ್ಗಾದೇವಿ ದೇವಾಲಯದಲ್ಲಿ ಕೆಲವು ಆಚರಣೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಮಕ್ಕಳಿಗೆ ಹಾಲು ವಿತರಿಸಲಾಯಿತು, ನಂತರ ಅವರು ಅನಾರೋಗ್ಯಕ್ಕೆ ಒಳಗಾದರು. ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ, ಸದ್ಯ ಎಲ್ಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಮಕ್ಕಳಿಗೆ ಚಿಕಿತ್ಸೆ ಮುಂದುವರೆದಿದೆ" ಎಂದು ಹೇಳಿದರು.
ಮಕ್ಕಳು ಸೇವಿಸಿದ ಹಾಲಿನಲ್ಲಿ ಗಾಂಜಾ ಸೇರಿರಬಹುದೆಂದು ಮಕ್ಕಳ ಕುಟುಂಬದವರು ಆರೋಪಿಸಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾದ ಗುಡ್ಡು ಎಂಬ ಮಗುವಿನ ತಂದೆ ಮಾಧ್ಯಮದೊಂದಿಗೆ ಮಾತನಾಡುತ್ತಾ, "ಮಕ್ಕಳು ಸೇವಿಸಿದ್ದ ಹಾಲಿನಲ್ಲಿ ಗಾಂಜಾ ಬೆರೆಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದು, ಇದರಿಂದಲೇ ಮಕ್ಕಳು ಅದನ್ನು ಕುಡಿದ ನಂತರ ಅನಾರೋಗ್ಯಕ್ಕೆ ಒಳಗಾದರು" ಎಂದು ಆರೋಪಿಸಿದ್ದಾರೆ.