ಕೇರಳ ಪ್ರವಾಹ: 305 ಪರಿಹಾರ ಕೇಂದ್ರಗಳಲ್ಲಿ 59ಸಾವಿರಕ್ಕೂ ಹೆಚ್ಚು ಮಂದಿಗೆ ಆಶ್ರಯ-ಸಿಎಂ
ಆಗಸ್ಟ್ 28ರವರೆಗೆ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ 738 ಕೋಟಿ ರೂ. ಠೇವಣಿ ಮಾಡಲಾಗಿದೆ.
ತಿರುವನಂತಪುರಂ: ಇತ್ತೀಚೆಗೆ ಉಂಟಾದ ಭಾರೀ ಪ್ರವಾಹದಲ್ಲಿ ಮನೆ ಕಳೆದುಕೊಂಡ 59,296 ಮಂದಿಗೆ 305 ಪರಿಹಾರ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಕೇರಳ ಶಾಸಕಾಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇದುವರೆಗೂ ಪ್ರವಾಹ ಪರಿಹಾರ ಮತ್ತು ಪುನರ್ವಸತಿ ಕಾರ್ಯಕ್ಕಾಗಿ ಆಗಸ್ಟ್ 28ರವರೆಗೆ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ 738 ಕೋಟಿ ರೂ. ಠೇವಣಿ ಮಾಡಲಾಗಿದೆ ಎಂದರಲ್ಲದೆ, ಮುಂದಿನ ದಿನಗಳಲ್ಲಿ ಕೇರಳದಲ್ಲಿ ಅಗತ್ಯ ಮೂಲಭೂತ ಸೌಕರ್ಯ ಮತ್ತು ಪುನರ್ವಸತಿ ಕಲ್ಪಿಸುವ ಬಗ್ಗೆ ಚರ್ಚೆ ನಡೆಸಿ ಯೋಜನೆ ರೂಪಿಸುವ ಅಗತ್ಯತೆ ಬಗ್ಗೆ ಸಿಎಂ ಚರ್ಚೆ ನಡೆಸಿದರು.
ಮುಂದುವರೆದು ಮಾತನಾಡಿದ ಅವರು, ಆಗಸ್ಟ್ 9 ರಿಂದ ಆಗಸ್ಟ್ 15ರವರೆಗೆ ರಾಜ್ಯದಲ್ಲಿ 483 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾಮಾನ್ಯಕ್ಕಿಂತ ಮೂರು ಪಟ್ಟು ಹೆಚ್ಚು ಮಳೆಯಾಗಿದೆ. ಇದುವರೆಗೂ ರಾಜ್ಯದಲ್ಲಿ 352.2 ಮೀ.ಮೀ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ಅಣೆಕಟ್ಟೆಗಳು ಭರ್ತಿಯಾಗಿವೆ ಮತ್ತು ಭೂಕುಸಿತ, ಗುಡ್ಡ ಕುಸಿತದಿಂದಾಗಿ ಲಕ್ಷಗಟ್ಟಲೆ ಮನೆಗಳು ನಾಶವಾಗಿದ್ದು, ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಅನೇಕ ಸರ್ಕಾರಿ ಕಚೇರಿಗಳಲ್ಲಿ ಅನೇಕ ದಾಖಲೆಗಳು ಪ್ರವಾಹದಿಂದಾಗಿ ನಾಶವಾಗಿವೆ ಎಂದು ಮುಖ್ಯಮಂತ್ರಿ ಪಿನರಾಯಿ ವಿಜಯನ್ ಹೇಳಿದ್ದಾರೆ.