ನವದೆಹಲಿ: ಕಾಶ್ಮೀರ ಸಮಸ್ಯೆಯ ಬಗೆಗಿನ ಉದ್ವಿಗ್ನತೆಯ ಮಧ್ಯೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಿಯಂತ್ರಣ ರೇಖೆಯ ಹತ್ತಿರ ಬಾಗ್ ಮತ್ತು ಕೋಟ್ಲಿ ವಲಯದ ಸುಮಾರು 2,000 ಸೈನಿಕರ ಮತ್ತೊಂದು ಬ್ರಿಗೇಡ್ ನ್ನು ಪಾಕಿಸ್ತಾನ ಸ್ಥಳಾಂತರಿಸಿದೆ ಎಂದು ಭಾರತೀಯ ಸೇನಾ ಮೂಲಗಳು ಗುರುವಾರ ತಿಳಿಸಿವೆ.


COMMERCIAL BREAK
SCROLL TO CONTINUE READING

ಪ್ರಸ್ತುತ ಅವರನ್ನು ಆಕ್ರಮಣಕಾರಿಯಾಗಿ ನಿಯೋಜಿಸಲಾಗಿಲ್ಲ. ಆದಾಗ್ಯೂ, ಭಾರತೀಯ ಸೇನೆಯು ಅವರ ಚಲನ ವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಮೂಲಗಳು ಎಎನ್‌ಐಗೆ ತಿಳಿಸಿವೆ. ನಿಯೋಜಿಸಿದ ಸೈನಿಕರು ಶಾಂತಿಯುತ ಸ್ಥಳದಿಂದ ಬಂದವರು, ಇದೀಗ ನಿಯಂತ್ರಣ ರೇಖೆಯಿಂದ 30 ಕಿಲೋಮೀಟರ್ ದೂರದಲ್ಲಿ ಬೀಡುಬಿಟ್ಟಿದ್ದಾರೆ ಎಂದು ಅದು ಹೇಳಿದೆ.


ಪಾಕಿಸ್ತಾನ ಸೇನಾ ಪಡೆಗಳ ಸ್ಥಳಾಂತರವು ಈಗಾಗಲೇ ತನ್ನ ಭಯೋತ್ಪಾದಕ ಮೂಲಸೌಕರ್ಯವನ್ನು ಸಕ್ರಿಯಗೊಳಿಸಿರುವ ಸಮಯದಲ್ಲಿ ಮತ್ತು ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೋಯಿಬಾ (ಎಲ್‌ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಎಂ) ಸ್ಥಳೀಯರನ್ನು ಮತ್ತು ಆಫ್ಘನ್ನರನ್ನು ದೊಡ್ಡ ಪ್ರಮಾಣದಲ್ಲಿ ನೇಮಕ ಮಾಡಲು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ. 


ಪಾಕಿಸ್ತಾನವು ಕಣಿವೆಯಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ಪಾಕಿಸ್ತಾನ ಸೇನೆಯು ಸೈನ್ಯವನ್ನು ನಿಯಂತ್ರಣ ರೇಖೆಯ ಹತ್ತಿರಕ್ಕೆ ಸರಿಸಿದೆ. ಉಭಯ ದೇಶಗಳ ನಡುವೆ ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಬಹಳ ಉದ್ವಿಗ್ನ ಎಂದು ಹೇಳುವ ಮೂಲಕ ಅಂತರರಾಷ್ಟ್ರೀಯ ಗಮನ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಮೂಲಗಳು ಹೇಳಿವೆ.


ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ 370 ನೇ ವಿಧಿಯನ್ನು ರದ್ದುಪಡಿಸಿದಾಗಿನಿಂದ, ಭಯೋತ್ಪಾದಕರನ್ನು ತಳ್ಳಲು ಮತ್ತು ರಾಜ್ಯದಲ್ಲಿ ಹಿಂಸಾಚಾರವನ್ನು ಪ್ರಚೋದಿಸಲು ಪಾಕಿಸ್ತಾನವು 100 ಎಸ್‌ಎಸ್‌ಜಿ ಕಮಾಂಡೋಗಳನ್ನು ನಿಯಂತ್ರಣ ರೇಖೆಯ ಉದ್ದಕ್ಕೂ ನಿಯೋಜಿಸಿತು. ಪಾಕಿಸ್ತಾನವು ತನ್ನ ವಿಶೇಷ ಪಡೆಗಳನ್ನು ಗುಜರಾತ್ ಎದುರಿನ ಸರ್ ಕ್ರೀಕ್ ಪ್ರದೇಶದಲ್ಲಿ ನಿಯೋಜಿಸಿದೆ.