ಮಹಿಳೆಯರ ಸುರಕ್ಷತೆಗೆ ಆರಂಭವಾಯ್ತು ತುರ್ತು ಸಹಾಯವಾಣಿ 112 !
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಅವರು ಜಂಟಿಯಾಗಿ ಈ ಸೇವೆಗೆ ಚಾಲನೆ ನೀಡಿದ್ದಾರೆ.
ನವದೆಹಲಿ: ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿ ತುರ್ತು ಪರಿಸ್ಥಿತಿಯಲ್ಲಿ ಸ್ಪಂದಿಸುವ ಉದ್ದೇಶದಿಂದ ಕೇಂದ್ರ ಸರಕಾರ 16 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಮುಂಬೈ ನಗರದಲ್ಲಿ ತುರ್ತು ಸಹಾಯವಾಣಿಯನ್ನು ಮಂಗಳವಾರ ಆರಂಭಿಸಿದೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಅವರು ಜಂಟಿಯಾಗಿ ಈ ಸೇವೆಗೆ ಚಾಲನೆ ನೀಡಿದರು. ಆಂಧ್ರಪ್ರದೇಶ, ಉತ್ತರಾಖಂಡ, ಪಂಜಾಬ್, ಕೇರಳ, ಮಧ್ಯಪ್ರದೇಶ, ರಾಜಾಸ್ಥಾನ, ಉತ್ತರ ಪ್ರದೇಶ, ತಮಿಳುನಾಡು, ಗುಜರಾತ್ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಷ್ಟೇ ಅಲ್ಲದೆ, ಹಿಮಾಚಲ ಪ್ರದೇಶ ಮತ್ತು ಅಂಡಮಾನ್, ದೀಯು-ದಾಮನ್, ದಾದರ್ ನಗರ ಹವೇಲಿನಲ್ಲಿಯೂ ಆರಂಭಿಸಲಾಗುವುದು ಎಂದು ರಾಜನಾಥ್ ಸಿಂಗ್ ಈ ಸಂದರ್ಭದಲ್ಲಿ ತಿಳಿಸಿದರು.
ಮಹಿಳೆಯರ ರಕ್ಷಣೆಯ ದೃಷ್ಟಿಯಿಂದ ಈ ಯೋಜನೆ ದೇಶದಲ್ಲಿಯೇ ಹೊಸ ಮೈಲಿಗಲ್ಲಾಗಿದ್ದು, ರಾಜ್ಯ ‘ತುರ್ತು ಪ್ರತಿಕ್ರಿಯೆ ಕೇಂದ್ರ' (ERSS) ವೆಬ್ಸೈಟ್ ಮೂಲಕ ಇ-ಮೇಲ್ ಅಥವಾ SOS ಕಳುಹಿಸಬಹುದು. ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಸ್ಟೋರ್ನಲ್ಲಿ '112' ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಮೂಲಕ ಸಂಕಷ್ಟದಲ್ಲಿರುವ ಮಹಿಳೆಯರು ದೇಶಾದ್ಯಂತ 112 ಸಂಖ್ಯೆಗೆ ಡಯಲ್ ಮಾಡಿ ನೆರವು ಪಡೆಬಹುದು. ಈ ವ್ಯವಸ್ಥೆಯಡಿಯಲ್ಲಿ ಎಲ್ಲ ರಾಜ್ಯಗಳೂ ಸಮರ್ಪಿತ ತುರ್ತು ಸ್ಪಂದನಾ ಕೇಂದ್ರ ಇಆರ್ ಸಿ ಸ್ಥಾಪಿಸಬೇಕು. ಈ ತುರ್ತು ಸಹಾಯವಾಣಿಯಿಂದಾಗಿ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅಪಹರಣ ಪ್ರಕರಣಗಳನ್ನು ನಿಯಂತ್ರಿಸಲು ಮತ್ತು ಸುಲಭವಾಗಿ ಬೇಧಿಸಲು ಸಹಾಯವಾಗಲಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.