ಜೂ. 6ರಿಂದ 15ರವರೆಗೆ ಲೋಕಸಭೆಯ ಚೊಚ್ಚಲ ಅಧಿವೇಶನ
ಮೇ 31ರಂದು ಹೊಸ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಡೆಯಲಿದೆ.
ನವದೆಹಲಿ: 17ನೇ ಲೋಕಸಭೆಯ ಚೊಚ್ಚಲ ಅಧಿವೇಶನ ಮುಂದಿನ ಜೂನ್ 6ರಿಂದ ಪ್ರಾರಂಭವಾಗಿ ಜೂ.15ರವರೆಗೆ ನಡೆಯಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಮೇ 30ರಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಂಪುಟದ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮರುದಿನ ಅಂದರೆ ಮೇ 31ರಂದು ಹೊಸ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಡೆಯಲಿದೆ. ಮೊದಲ ಸಚಿವ ಸಂಪುಟ ಸಭೆಯಲ್ಲಿ 17ನೇ ಲೋಕಸಭೆಯ ಮೊದಲ ಅಧಿವೇಶನದ ದಿನಾಂಕವೂ ನಿರ್ಧಾರವಾಗುತ್ತದೆ.
ಜೂನ್ 6ರಂದು ಅಧಿವೇಶನ ಆರಂಭವಾಗಲಿದ್ದು, ಮೊದಲ ದಿನ ಸಂಸತ್ತಿನ ಎರಡೂ ಸದನಗಳ ಸಮಾವೇಶವೂ ನಡೆಯಲಿದೆ. ಅದರಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಹಾಜರಿರುತ್ತಾರೆ. ಲೋಕಸಭೆ ಹಂಗಾಮಿ ಸ್ಪೀಕರ್ ಕೂಡ ಅಂದೇ ಆಯ್ಕೆ ಆಗುತ್ತಾರೆ ಎನ್ನಲಾಗಿದೆ. ಬಳಿಕ ಹಂಗಾಮಿ ಸ್ಪೀಕರ್ ಆಗಿ ಆಯ್ಕೆಯಾಗುವವರು ನೂತನ ಸಂಸದರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಇದಾದ ಮೇಲೆ ಜೂನ್ 10ಕ್ಕೆ ಸ್ಪೀಕರ್ ಚುನಾವಣೆ ನಡೆಯಲಿದೆ.