ಕೋಲ್ಕತ್ತಾ: ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದೆ. ಆದರೆ ಪಕ್ಷ ನನ್ನ ರಾಜಿನಾಮೆ ಪ್ರಸ್ತಾಪವನ್ನು ತಿರಸ್ಕರಿಸಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ದಕ್ಷಿಣ ಕೊಲ್ಕತ್ತಾದ ಕಲಿಘಾಟ್ ನಿವಾಸದಲ್ಲಿ ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ವಿಶ್ಲೇಷಣೆ ನಡೆಸಲು ಕರೆದಿದ್ದ ತುರ್ತು ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಮತಾ ಬ್ಯಾನರ್ಜಿ, "ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಇಷ್ಟಪಡುವುದಿಲ್ಲ ಎಂದು ಪಕ್ಷಕ್ಕೆ ತಿಳಿಸಿದ್ದೇನೆ. ಕಳೆದ ಆರು ತಿಂಗಳಿಂದ ನನಗೆ ಕೆಲಸ ಮಾಡಲು ಸಾಧ್ಯವಾಗಿಲ್ಲ. ನಾನೋರ್ವ ಅಧಿಕಾರವಿಲ್ಲದ ಮುಖ್ಯಮಂತ್ರಿಯಾಗಿದ್ದೆ. ಅದನ್ನು ನಾನು ಒಪ್ಪಲಾರೆ. ನನಗೆ ಮುಖ್ಯಮಂತ್ರಿ ಕುರ್ಚಿ ಏನೇನೂ ಅಲ್ಲ, ಪಕ್ಷದ ಚಿನ್ಹೆಯೇ ನಂಗೆ ಮುಖ್ಯ" ಎಂದು ಹೇಳಿದರು.


ಮುಂದುವರೆದು ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ತುರ್ತು ಪರಿಸ್ಥಿತಿಯ ವಾತಾವರಣ ನಿರ್ಮಾಣ ಮಾಡಿ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಕೇಂದ್ರೀಯ ಭದ್ರತಾ ಪಡೆಗಳು ನಮ್ಮ ವಿರುದ್ಧ ಕೆಲಸ ಮಾಡಿವೆ. ಹಿಂದು ಮತ್ತು ಮುಸ್ಲಿಮರನ್ನು ವಿಭಜಿಸಿ ಮತಗಳನ್ನು ಒಡೆದಿದ್ದಾರೆ. ಹಿಂಸಾಚಾರ ನಡೆಸಿದ್ದಾರೆ. ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದರೂ ಆಯೋಗ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಮಮತಾ ಬ್ಯಾನರ್ಜಿ ಆರೋಪ ಮಾಡಿದರು.


ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗಣನೀಯ ಸಾಧನೆ ಮಾಡಿದ್ದು, ಹಲವು ವರ್ಷಗಳಿಂದ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡು ಹೊಡೆದಿದೆ.  ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳಲ್ಲಿ 2014ರ ಚುನಾವಣೆಯಲ್ಲಿ 2 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಈ ಬಾರಿ 18 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಮತ್ತೊಂದೆಡೆ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷ ಎರಡು ಸ್ಥಾನಗಳ ಪೈಕಿ ಭಾರಿ ಸುಧಾರಣೆಯಾಗಿದೆ. ಮಮತಾ ಬ್ಯಾನರ್ಜಿಯವರ ತೃಣಮೂಲವು 22 ಸ್ಥಾನಗಳನ್ನು ಗೆದ್ದಿದೆ.