ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ: ಉಪಮುಖ್ಯಮಂತ್ರಿ ಪರಮೇಶ್ವರ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ತೀರ್ಪುಗಾರರು. ದೇಶದ ಜನರ ಸೇವೆ ಮಾಡುವ ಅವಕಾಶ ದೊರೆತ ಬಿಜೆಪಿ ಹಾಗೂ ನರೇಂದ್ರಮೋದಿ ಅವರಿಗೆ ಅಭಿನಂದನೆ- ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ
ಬೆಂಗಳೂರು: ಲೋಕಸಭಾ ಫಲಿತಾಂಶ ಕುರಿತ ನಮ್ಮನಿರೀಕ್ಷೆ ಸಂಪೂರ್ಣ ತದ್ವಿರುದ್ಧವಾಗಿ ಬಂದಿದೆ. ಯಾವ ಕಾರಣಕ್ಕೆ ಪಕ್ಷ ಸೋಲು ಅನುಭವಿಸಿದೆ ಎಂಬುದನ್ನು ಎಲ್ಲಾ ನಾಯಕರು ಸೇರಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.
ಸದಾಶಿವನಗರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾದೇಶದಂತೆ ಗೆಲುವು ಸಾಧಿಸಿದ ಬಿಜೆಪಿ ಹಾಗೂ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜನಾದೇಶಕ್ಕೆ ನಾವು ತಲೆ ಬಾಗಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮೈತ್ರಿಯೊಂದಿಗೆ ಕನಿಷ್ಠ 20 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ಕೆಲ ನಾಯಕರ ಸೋಲು ಕೂಡ ಅನಿರೀಕ್ಷಿತವಾಗಿದೆ.
ಇದೇ ಕೊನೆ ಚುನಾವಣೆ ಏನಲ್ಲ. ಸಾಕಷ್ಟು ಗೆಲುವನ್ನು ಕಾಂಗ್ರೆಸ್ ನೋಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಸ್ವಾಭಾವಿಕ. ಹೀಗಾಗಿ ಕಾರ್ಯಕರ್ತರು ಯಾರೂ ನಿರಾಶೆಯಾಗುವ ಅಗತ್ಯವಿಲ್ಲ ಎಂದರು.
ದೇವೇಗೌಡ 1 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವ ನಿರೀಕ್ಷೆ ಇತ್ತು. ಮಧುಗಿರಿ,ಗುಬ್ಬಿ ಕೆಲ ತಾಲೂಕಿನಿಂದ ಮತಗಳು ಕಡಿಮೆಯಾಗಿವೆ.
ಇದು ರಾಷ್ಟ್ರೀಯ ಚುನಾವಣೆಯಾದ್ದರಿಂದ ಈ ಫಲಿತಾಂಶ ರಾಜ್ಯ ಸರಕಾರದ ಮೇಲೆ ಪರಿಣಾಮ ಬೀರುವುದಿಲ್ಲ. ಆದಾಗ್ಯು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾಳೆ ಸಚಿವ ಸಂಪುಟ ಸದಸ್ಯರ ಸಭೆ ಕರೆದಿದ್ದು, ಈ ಬಗ್ಗೆ ಚರ್ಚಿಸಲಿದ್ದಾರೆ.