ನವದೆಹಲಿ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲವನ್ನು ಜಿಎಸ್‍ಟಿ ವ್ಯಾಪ್ತಿಗೆ ತರುವ ನಿರ್ಧಾರವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬೆಂಬಲಿಸಿದ್ದಾರೆ.


COMMERCIAL BREAK
SCROLL TO CONTINUE READING

ರಾಜ್ಯಸಭೆಯಲ್ಲಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಮಾತನಾಡಿ, ಪ್ರಸ್ತುತ 19 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿ ಅಡಿಯಲ್ಲಿ ತರಲು ಅಡ್ಡಿಯಾಗಿರುವುದು ಏನು? ಯಾವಾಗ ಜಿಎಸ್‍ಟಿ ಕೌನ್ಸಿಲ್ ಈ ವಿಚಾರದ ಬಗ್ಗೆ ಚರ್ಚೆ ನಡೆಸುತ್ತದೆ ಎಂದು ಪ್ರಶ್ನಿಸಿದರು.


ಇದಕ್ಕೆ ಪ್ರತಿಕ್ರಿಯಿಸಿದ ಅರುಣ್ ಜೇಟ್ಲಿ, ಜಿಎಸ್‍ಟಿ ಕರಡು ನಿಯಮಗಳನ್ನು ರಚಿಸುವ ವೇಳೆ ಯುಪಿಎ ಪೆಟ್ರೋಲ್ ಮತ್ತು ಡೀಸೆಲ್ ಜಿಎಸ್‍ಟಿ ವ್ಯಾಪ್ತಿಯ ಒಳಗಡೆ ಸೇರಿಸಲಿಲ್ಲ. ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಹಾಳಾಗಬಹುದು ಎನ್ನುವ ಕಾರಣಕ್ಕೆ ಯುಪಿಎ ಸೇರಿಸಲಿಲ್ಲ. ಆದರೆ ಈಗ ರಾಜ್ಯಗಳು ಜಿಎಸ್‍ಟಿ ವ್ಯಾಪ್ತಿಗೆ ಸೇರ್ಪಡೆಯಾಗುವ ಬಗ್ಗೆ ರಾಜ್ಯಗಳು ಶೀಘ್ರ ಅಥವಾ ನಂತರವಾದರೂ ಒಪ್ಪಿಗೆ ನೀಡಬಹುದು ಎನ್ನುವ ಆಶಾವಾದವನ್ನು ನಾವು ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದರು.


ಕಳೆದ ವಾರ ಬಿಹಾರದ ಹಣಕಾಸು ಸಚಿವ ಸುಶೀಲ್ ಮೋದಿ ಕಳೆದ ವಾರ ಜಿಎಸ್‍ಟಿ ವ್ಯಾಪ್ತಿಯ ಅಡಿಯಲ್ಲಿ ವಿದ್ಯುತ್, ಪೆಟ್ರೋಲಿಯಂ ಉತ್ಪನ್ನಗಳನ್ನು ತರುವ ಬಗ್ಗೆ ಸುಳಿವು ನೀಡಿದ್ದರು. ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದ ವೇಳೆ ಮಾತನಾಡಿದ ಸುಶೀಲ್ ಮೋದಿ, ಎಲೆಕ್ಟ್ರಿಸಿಟಿ, ರಿಯಲ್ ಎಸ್ಟೇಟ್, ಪೆಟ್ರೋಲಿಯಂ ಜಿಎಸ್‍ಟಿ ವ್ಯಾಪ್ತಿಗೆ ತರಬೇಕಿದೆ. ಆದರೆ ಇದನ್ನು ವ್ಯಾಪ್ತಿಗೆ ತರುವುದು ಜಿಎಸ್‍ಟಿ ಕೌನ್ಸಿಲ್‍ಗೆ ಬಹಳ ಸವಾಲಿದೆ ಎಂದು ತಿಳಿಸಿದ್ದರು.