ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ನ್ಯೂಯಾರ್ಕ್ ಆಸ್ಪತ್ರೆಯೊಂದರಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವುದರಿಂದ ಮಧ್ಯಂತರ ಬಜೆಟ್​ಗೆ ಒಂಬತ್ತು ದಿನಗಳ ಮೊದಲು ರೈಲ್ವೇ ಸಚಿವ ಪಿಯೂಷ್‌ ಗೋಯೆಲ್‌ ಅವರಿಗೆ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್‌ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ. ಎ


COMMERCIAL BREAK
SCROLL TO CONTINUE READING

ಪ್ರಧಾನಿ ನರೇಂದ್ರ ಮೋದಿಯ ಸಲಹೆಯ ಮೇರೆಗೆ, ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯನ್ನು ರೈಲ್ವೇ ಸಚಿವ ಪಿಯೂಷ್‌ ಗೋಯೆಲ್‌ ಅವರಿಗೆ ನೀಡಲಾಗಿದೆ ಎಂದು ರಾಷ್ಟ್ರಪತಿ ಭವನ ಬಿಡುಗಡೆ ಮಾಡಿದ ಮಾಹಿತಿ ತಿಳಿಸಿದೆ. ಎನ್‌ಡಿಎ ಸರಕಾರದ ಪ್ರಸಕ್ತ ಅವಧಿಯ ಅಂತಿಮ ಬಜೆಟ್ ಅನ್ನು ಫೆ.1ರಂದು ಪಿಯೂಷ್ ಗೋಯಲ್ ಮಂಡಿಸಲಿದ್ದಾರೆ.


ಯಾವುದೇ ಖಾತೆ ಹೊಂದಿಲ್ಲದಿದ್ದರೂ ಮಂತ್ರಿಯಾಗಿಯೇ ಮುಂದುವರಿಯಲಿರುವ ಜೇಟ್ಲಿ:
ಅರುಣ್ ಜೇಟ್ಲಿ ಅವರು ಯಾವುದೇ ಖಾತೆ ಹೊಂದಿಲ್ಲದಿದ್ದರೂ ಮಂತ್ರಿಯಾಗಿಯೇ ಮುಂದುವರಿಯಲಿದ್ದಾರೆ. ಅರುಣ್ ಜೇಟ್ಲಿ ಸಂಪೂರ್ಣವಾಗಿ ಚೇತರಿಸಿಕೊಂಡು ಕರ್ತವ್ಯಕ್ಕೆ ಅಣಿಗೊಳ್ಳುವವರೆಗೂ ಪಿಯೂಷ್ ಗೋಯಲ್ ಅವರೇ ಈ ಎಲ್ಲಾ ಖಾತೆಗಳನ್ನ ನಿಭಾಯಿಸಲಿದ್ದಾರೆ. 


ಕಳೆದ ವರ್ಷ ಮೇ ನಲ್ಲಿ ಗೋಯಲ್ ಗೆ ಹೆಚ್ಚುವರಿ ಸಚಿವ ಖಾತೆ ನೀಡಲಾಗಿತ್ತು. ಆ ಸಮಯದಲ್ಲಿ ಜೇಟ್ಲಿ ಮೂತ್ರಪಿಂಡ ಕಸಿ ಚಿಕಿತ್ಸೆಗೆ ಒಳಗಾಗಿದ್ದರು. ಜೇಟ್ಲಿ ಅನುಪಸ್ಥಿತಿಯಲ್ಲಿ 100 ದಿನಗಳ ಕಾಲ ಗೋಯಲ್ ಅವರು ವಿತ್ತ ಸಚಿವಾಲಯದ ಜವಾಬ್ದಾರಿ ನಿರ್ವಹಿಸಿದ್ದರು. ಕಳೆದ ವರ್ಷ ಆಗಸ್ಟ್ 23 ರಂದು ಜೇಟ್ಲಿ ಕರ್ತವ್ಯಕ್ಕೆ ವಾಪಸಾದ ಬಳಿಕ ಹಣಕಾಸು ಮತ್ತು ಕಾರ್ಪೊರೇಟ್ ಸಚಿವಾಲಯದ ಜವಾಬ್ದಾರಿಯನ್ನು ವಹಿಸಿಕೊಂಡರು.


ಕೇಂದ್ರ ಸಚಿವ ಅರುಣ್ ಜೇಟ್ಲಿಯವರಿಗೆ ಮಂಗಳವಾರ ನ್ಯೂಯಾರ್ಕ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. ವೈದ್ಯರು ಎರಡು ವಾರಗಳ ವಿಶ್ರಾಂತಿ ಪಡೆಯುವಂತೆ ಜೇಟ್ಲಿಗೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಜನವರಿ 13 ರಂದು ಅಮೆರಿಕಾಕ್ಕೆ ತೆರಳಿದ್ದ ಅರುಣ್ ಜೇಟ್ಲಿ ಅವರಿಗೆ ಮೃದು ಅಂಗಾಂಶ ಕ್ಯಾನ್ಸರ್ ಬಗ್ಗೆ  ತಪಾಸಣೆ ಮಾಡಲಾಗಿತ್ತು. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ಜೇಟ್ಲಿ ಸಕ್ರಿಯರಾಗಿದ್ದರು.