ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲಿನ ದಾಳಿ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಪಕ್ಷದ ಎಲ್ಲಾ ನಾಯಕರು ಶುಕ್ರವಾರ ಆಯೋಜನೆಗೊಂಡಿದ್ದ ಪಕ್ಷದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮೋದಿ ಮತ್ತು ಶಾ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ರ್ಯಾಲಿಗಳು ಮತ್ತು ಇತರ ರಾಜಕೀಯ ಕಾರ್ಯಕ್ರಮಗಳನ್ನು ಹೊಂದಿದ್ದರು. ಪ್ರಧಾನಿ ಮೋದಿ ಶುಕ್ರವಾರ ಮಧ್ಯಪ್ರದೇಶದ ಇಟಾರ್ಸಿ ಯಲ್ಲಿ ಆಯೋಜನೆಗೊಂಡಿದ್ದ ರ್ಯಾಲಿಯಲ್ಲಿ ಭಾಗವಹಿಸುವಂತವರಿದ್ದರು. ಅದೇ ವೇಳೆ ಅಮಿತ್ ಶಾ ಛತ್ತೀಸ್ಗಢದಲ್ಲಿ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಪುಲ್ವಾಮದಲ್ಲಿ ಭಯೋತ್ಪಾದಕರ ದಾಳಿಯಿಂದಾಗಿ ಬಿಜೆಪಿಯ ಇಂದಿನ ಎಲ್ಲಾ ಕಾರ್ಯಕ್ರಮಗಳನ್ನೂ ರದ್ದುಗೊಳಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.


ಪ್ರಧಾನಿ ಮೋದಿ ಮಧ್ಯಪ್ರದೇಶದ ರ್ಯಾಲಿಯನ್ನು ಹೊರತುಪಡಿಸಿ ಉತ್ತರಪ್ರದೇಶದ ಝಾನ್ಸಿಯಲ್ಲಿ ಹಲವು ಯೋಜನೆಗಳನ್ನು ಉದ್ಘಾಟಿಸಬೇಕಿತ್ತು. ಆ ಕಾರ್ಯಕ್ರಮಗಳನ್ನೂ ಸಹ ರದ್ದುಗೊಳಿಸಲಾಗಿದೆ. 


ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ದೇಹವನ್ನು ಭಾರತಿಯ ವಾಯುಪಡೆಯ ಸಿ-17 ವಿಮಾನದ ಮೂಲಕ ಇಂದು ದೆಹಲಿಗೆ ತರಲಾಗುವುದು. ಪಾಲಂ ವಿಮಾನ ನಿಲ್ದಾಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.