`ಸಿಯೋಲ್ ಶಾಂತಿ ಪುರಸ್ಕಾರ`ವನ್ನು ದೇಶದ ಜನರಿಗೆ ಅರ್ಪಿಸಿದ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಇದನ್ನು ಭಾರತೀಯರಿಗೆ ಸಂದ ಗೌರವ ಎಂದು ವರ್ಣಿಸಿದ್ದಾರೆ. ಈ ಪ್ರಶಸ್ತಿಯನ್ನು ಪಡೆದವರಲ್ಲಿ ಪ್ರಧಾನಿ ಮೋದಿ ಮೊದಲ ಭಾರತೀಯರಾಗಿದ್ದಾರೆ.
ಸಿಯೋಲ್: ದಕ್ಷಿಣ ಕೊರಿಯಾ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ದಕ್ಷಿಣ ಕೊರಿಯಾ ಪ್ರತಿಷ್ಠಿತ 2018ರ ಸಿಯೋಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರಧಾನಿ ಮೋದಿ ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯರಾಗಿದ್ದು, ಇದನ್ನು ಭಾರತೀಯರಿಗೆ ಸಂದ ಗೌರವ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವರ್ಣಿಸಿದ್ದಾರೆ.
ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆ ಆಚರಿಸುತ್ತಿರುವ ಈ ವರ್ಷದಲ್ಲಿ ಈ ಗೌರವ ಸ್ವೀಕರಿಸುತ್ತಿರುವುದು ನನಗೆ ಹೆಮ್ಮೆಯ ವಿಷಯ. ಈ ಗೌರವ ನನಗಲ್ಲ, ಬದಲಿಗೆ ಇದು ಇಡೀ ಭಾರತಕ್ಕೆ ಸಂದ ಗೌರವವಾಗಿದೆ. ಈ ಪುರಸ್ಕಾರದಲ್ಲಿ ದೊರೆತ ಗೌರವವನ್ನು ನಾನು 'ನಮಾಮಿ ಗಂಗಾ ಯೋಜನೆ'ಗೆ ಅರ್ಪಿಸುತ್ತೇನೆ ಎಂದು ಅವರು ಹೇಳಿದರು.
ಇದಕ್ಕೂ ಮೊದರು ಇಂದು ಬೆಳಿಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಯೋತ್ಪಾದನೆ ವಿರುದ್ದ ಹೋರಾಡಲು ವಿಶ್ವದ ಎಲ್ಲಾ ರಾಷ್ಟ್ರಗಳು ಒಗ್ಗೂಡಬೇಕು ಎಂದು ಕರೆ ನೀಡಿದ್ದರು. ಭಾರತ ಗೃಹ ಸಚಿವಾಲಯ ಮತ್ತು ಕೊರಿಯಾದ ರಾಷ್ಟ್ರೀಯ ಪೊಲೀಸ್ ಏಜೆನ್ಸಿ ನಡುವೆ ಒಪ್ಪಂದವು ಮುಕ್ತಾಯಗೊಂಡಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನಮ್ಮ ಸಹಕಾರವನ್ನು ಇದು ಮತ್ತಷ್ಟು ಬಲಪಡಿಸುತ್ತದೆ ಎಂದು ಅವರು ಹೇಳಿದರು.
ಅಂತಾರಾಷ್ಟ್ರೀಯ ಸಹಕಾರ ವೃದ್ದಿ ಹಾಗೂ ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ ವೃದ್ದಿಗಾಗಿ ಮಹತ್ವದ ಕೊಡುಗೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಾಧನೆಯನ್ನು ಪರಿಗಣಿಸಿ ದಕ್ಷಿಣ ಕೊರಿಯಾ ಪ್ರತಿಷ್ಠಿತ 2018ರ ಸಿಯೋಲ್ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.