ನವದೆಹಲಿ: ಲೋಕಸಭಾ ಚುನಾವಣಾ ಮತ ಎಣಿಕೆಗೆ ಕೇವಲ ಎರಡೇ ದಿನಗಳು ಬಾಕಿ ಇದ್ದು, ಇದಕ್ಕೂ ಮುನ್ನ ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಎನ್ ಡಿ ಎ ಮಿತ್ರ ಪಕ್ಷಗಳಿಗೆ ವಿಶೇಷ ಭೋಜನಕ್ಕಾಗಿ ಆಹ್ವಾನ ನೀಡಿದ್ದಾರೆ. 



COMMERCIAL BREAK
SCROLL TO CONTINUE READING

ಬಿಜೆಪಿ ಕೇಂದ್ರ ಕಚೇರಿಯ ಮಿತ್ರ ಪಕ್ಷಗಳನ್ನು ಭೇಟಿ ಮಾಡಿದ ಪ್ರಧಾನಿ ಹಾಗೂ ಶಾ, ಫಲಿತಾಂಶಕ್ಕೂ ಮುನ್ನ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.ಈಗಾಗಲೇ ಚುನಾವಣೋತ್ತರ ಸಮೀಕ್ಷೆಯಲ್ಲಿ 14 ರಲ್ಲಿ 12 ಸಮೀಕ್ಷೆಗಳು ಎನ್.ಡಿ.ಎ ಗೆ ಬಹುಮತ ನೀಡಿವೆ. 


ಈ ಹಿನ್ನಲೆಯಲ್ಲಿ ಈಗ ಫಲಿತಾಂಶದ ಮುಂಚೆ ಬಿಜೆಪಿ ಹಾಗೂ ಪ್ರತಿಪಕ್ಷಗಳು ಕಾರ್ಯತಂತ್ರ ರೂಪಿಸುತ್ತಿವೆ.ಸಮೀಕ್ಷೆಗಳಲ್ಲಿ ಎನ್.ಡಿ.ಎ ಗೆ ಸ್ಪಷ್ಟಬಹುಮತ ಬಂದಿದ್ದರೂ ಕೂಡ ಅಂತಿಮ ಫಲಿತಾಂಶದಲ್ಲಿ ಇದಕ್ಕಿಂತ ಭಿನ್ನವಾದ ಫಲಿತಾಂಶವನ್ನು ನಿರೀಕ್ಷಿಸಲಾಗಿದೆ.ಆದ್ದರಿಂದ ಈಗಲೇ ಸರ್ಕಾರದ ರಚನೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಪ್ರಯತ್ನಿಸುತ್ತಿದೆ. ಈ  ಹಿನ್ನಲೆಯಲ್ಲಿ ಎಲ್ಲ ಎನ್.ಡಿ.ಎ ಮಿತ್ರಪಕ್ಷಗಳನ್ನು ದೆಹಲಿಯ ಅಶೋಕ್ ಹೋಟೆಲ್ ನಲ್ಲಿ ವಿಶೇಷ ಭೋಜನಕ್ಕಾಗಿ ಆಹ್ವಾನ ನೀಡಲಾಗಿದೆ.


ಎಲ್ಲ ಸಮೀಕ್ಷೆಗಳು ಈಗಾಗಲೇ ಬಿಜೆಪಿಗೆ ಮುನ್ನಡೆ ನೀಡಿರುವುದರಿಂದ ಪ್ರತಿಪಕ್ಷಗಳು ಮತ ಯಂತ್ರಗಳನ್ನು ವ್ಯಾಪಕ ರೀತಿಯಲ್ಲಿ ತಿರುಚಿರುವ ಸಾಧ್ಯತೆ ಇದೆ ಎಂದು ಆರೋಪಿಸಿವೆ. ಇದರಿಂದ ಈಗ ಫಲಿತಾಂಶದ ದಿನ ಈಗ ನಿಜಕ್ಕೂ ಎಲ್ಲರಿಗೂ ಕುತೂಹಲ  ಮೂಡಿಸಿದೆ.