ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು ಭಾರತೀಯ ಸೇನೆ, ಪ್ರಧಾನಿ ಮೋದಿಯಲ್ಲ: ರಾಹುಲ್ ಗಾಂಧಿ
ಯುಪಿಎ ಸರ್ಕಾರದ ಅವಧಿಯಲ್ಲಿ ನಡೆಸಲಾಗಿದ್ದ ಸರ್ಜಿಕಲ್ ಸ್ಟ್ರೈಕ್ ಗಳನ್ನು ವೀಡಿಯೋ ಗೇಮ್ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಭಾರತೀಯ ಸೇನೆಯನ್ನು ಅವಮಾನಿಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪಾಕಿಸ್ತಾನ ಆಕ್ರಮಿತ ಜಮ್ಮು-ಕಾಶ್ಮೀರದ ಪ್ರದೇಶದಲ್ಲಿ ಭಯೋತ್ಪಾದಕರ ನೆಲೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು, ಭಾರತೀಯ ಸೇನೆಯೇ ಹೊರತು ಪ್ರಧಾನಿ ಮೊದಿಯಲ್ಲ. ಅಷ್ಟಕ್ಕೂ ಭಾರತೀಯ ಸೇನೆ ಪ್ರಧಾನಿ ಮೋದಿಯ ಸ್ವಂತ ಆಸ್ತಿಯಲ್ಲ ಎಂದಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಯುಪಿಎ ಸರ್ಕಾರದ ಅವಧಿಯಲ್ಲಿ ನಡೆಸಲಾಗಿದ್ದ ಸರ್ಜಿಕಲ್ ಸ್ಟ್ರೈಕ್ ಗಳನ್ನು ವೀಡಿಯೋ ಗೇಮ್ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಭಾರತೀಯ ಸೇನೆಯನ್ನು ಅವಮಾನಿಸಿದ್ದಾರೆ. ನಾವು ನಮ್ಮ ಸಶಸ್ತ್ರ ಪಡೆಗಳನ್ನು ರಾಜಕೀಯಗೊಳಿಸುವುದಿಲ್ಲ. ಸೇನೆ ದೇಶಕ್ಕೆ ಸೇರಿದೆ, ಕೇವಲ ಒಬ್ಬ ವ್ಯಕ್ತಿಗಲ್ಲ ಎಂದು ಕಿಡಿ ಕಾರಿದರು.
ಭಯೋತ್ಪಾದನೆಯನ್ನು ಕಿತ್ತೊಗೆಯಲು ಕಠಿಣ ಕ್ರಮಗಳನ್ನು ಜರುಗಿಸಬೇಕು. ಮೋದಿ ಸರ್ಕಾರಕ್ಕೆ ಹೋಲಿಸಿದರೆ ನಾವು ಹೆಚ್ಚು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುತ್ತೇವೆ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು ಎಂದು ಅವರು ಹೇಳಿದರು.