ಪ್ರಧಾನಿ ಮೋದಿಗೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಧೈರ್ಯವಿಲ್ಲ: ರಾಹುಲ್ ಗಾಂಧಿ
ಪ್ರಧಾನಿ ಚೌಕಿದಾರ ಅಲ್ಲ, ಭಾಗೀದಾರ ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದರು.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮುಖದಲ್ಲಿ ಆತಂಕ ಕಾಣಿಸ್ತಿದೆ. ಅವರಿಗೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಧೈರ್ಯವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಕುರಿತು ನಡೆದ ಚರ್ಚೆಯಲ್ಲಿ ವಾದ ಮಂಡಿಸುತ್ತಾ, ರಾಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಪ್ರಧಾನಿ ಮೋದಿ ಭಾರೀ ಮೋಸ ನಡೆದಿದೆ. ಇದಕ್ಕೆ ಮೋದಿ ಅವರು ಉತ್ತರ ನೀಡಲೇಬೇಕು. ಪ್ರಧಾನಿ ಚೌಕಿದಾರ ಅಲ್ಲ, ಭಾಗೀದಾರ ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದರು.
ರಾಫೆಲ್ ವ್ಯವಹಾರದಲ್ಲಿ ಫ್ರಾನ್ಸ್'ಜೊತೆ ಖಾಸಗಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ರಕ್ಷಣಾ ಸಚಿವರು ಹೇಳಿದ್ದರು. ಆದರೆ ನಾನು ವೈಯಕ್ತಿಕವಾಗಿ ಫ್ರಾನ್ಸ್ ನ ಪ್ರಧಾನಮಂತ್ರಿಯನ್ನು ಭೇಟಿಯಾಗಿದ್ದೇನೆ. ಆಗ ಅವರು ಅಂತಹ ಯಾವುದೇ ಒಪ್ಪಂದ ಅಸ್ತಿತ್ವದಲ್ಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು ಎಂದು ರಾಹುಲ್ ಗಾಂಧಿ ಹೇಳಿದರು.
ಎಲ್ಲರ ಖಾತೆಗಳಿಗೆ 15 ಲಕ್ಷ ಹಾಕುತ್ತೇನೆ ಅಂದು ಮೋಸ ಮಾಡಿದರು. 4 ಕೋಟಿ ಯುವಕರಿಗೆ ಉದ್ಯೋಗ ಕೊಡುವುದಾಗಿ ವಂಚಿಸಿದರು. ಕೇವಲ 4 ಲಕ್ಷ ಜನರಿಗೆ ಉದ್ಯೋಗ ಸಿಕ್ಕಿದೆ. ಕೆಲವು ಕಡೆ ಹೋಗಿ ಪಕೋಡಾ ಮಾರಿ ಎನ್ನುತ್ತಾರೆ ಎಂದು ಕಿಡಿ ಕಾರಿದರಲ್ಲದೆ, ಪ್ರಧಾನಿ ಚೀನಾ ಅಧ್ಯಕ್ಷರೊಂದಿಗೆ ಗುಜರಾತ್‌ನಲ್ಲಿ ನದಿ ತೀರದಲ್ಲಿ ಜೋಕಾಲಿ ಆಡುತ್ತಿದ್ದರು. ಆವೇಳೆ ಡೋಕ್ಲಾಂನಲ್ಲಿ ಚೀನಾದ ಸಾವಿರ ಸೈನಿಕರು ನಮ್ಮ ಗಡಿ ನುಸುಳಿದ್ದರು ಎಂದು ಕಿಡಿ ಕಾರಿದರು.