ಗುರುಪೂರ್ಣಿಮೆ: ಉಡುಪಿಯ ವಿಶ್ವೇಶತೀರ್ಥ ಸ್ವಾಮೀಜಿ ಭೇಟಿ ಮಾಡಿದ ಪ್ರಧಾನಿ ಮೋದಿ
ಆಹ್ವಾನದ ಮೇರೆಗೆ ಪ್ರಧಾನಿ ಕಚೇರಿಗೆ ತೆರಳಿದ್ದ ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಉಭಯಕುಶಲೋಪರಿ ವಿಚಾರಿಸಿದರು.
ನವದೆಹಲಿ: ಗುರು ಪೂರ್ಣಿಮಾ ಪ್ರಯುಕ್ತ ಕರ್ನಾಟಕದ ಉಡುಪಿಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭೇಟಿ ಮಾಡಿದರು.
ಆಹ್ವಾನದ ಮೇರೆಗೆ ಪ್ರಧಾನಿ ಕಚೇರಿಗೆ ತೆರಳಿದ್ದ ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಉಭಯಕುಶಲೋಪರಿ ವಿಚಾರಿಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, "ಇಂದಿನ ದಿನ ಗುರುಪೂರ್ಣಿಮಾ ಆಗಿದ್ದು ವಿಶೇಷ ದಿನವಾಗಿದೆ, ಇದು ನನ್ನ ಪಾಲಿಗೆ ಇನ್ನಷ್ಟು ವಿಶೇಷವಾಗಿದೆ. ಗುರುಪೂರ್ಣಿಮೆಯ ದಿನದಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರೊಂದಿಗೆ ಕೆಲ ಕಾಲ ಕಳೆದಿದ್ದು ಖುಷಿ ಕೊಟ್ಟಿದೆ. ಸ್ವಾಮೀಜಿ ಅವರ ಚಿಂತನೆಗಳು, ಅವರಿಂದ ಕಲಿತ ವಿಚಾರಗಳು ವಿಶೇಷ ಅನುಭವ ನೀಡಿವೆ" ಎಂದಿದ್ದಾರೆ. ಅಷ್ಟೇ ಅಲ್ಲದೆ, ಅವರೊಂದಿಗೆ ಕಳೆದ ಕ್ಷಣಗಳ ಫೋಟೋಗಳನ್ನೂ ಸಹ ಮೋದಿ ಹಂಚಿಕೊಂಡಿದ್ದಾರೆ.
ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಪೇಜಾವರ ಮಠದ 32 ನೇ ಶ್ರೀಗಳಾದ ವಿಶ್ವೇಶತೀರ್ಥ ಸ್ವಾಮೀಜಿಯವರು ಬೆಂಗಳೂರಿನಲ್ಲಿ ಪೂರ್ಣಪ್ರಜಾ ವಿದ್ಯಾಪೀಠ ಸ್ಥಾಪಿಸಿ ವೇದಾಂತದ ಬಗ್ಗೆ ತರಬೇತಿ ನೀಡುತ್ತಿದ್ದಾರೆ.