ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಪಾಕ್‌ ಭಯೋತ್ಪಾದರ ಈ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ಭದ್ರತಾ ಪಡೆಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಘೋಷಿಸಿದರು. 


COMMERCIAL BREAK
SCROLL TO CONTINUE READING

ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಸಂಪುಟ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ದಾಳಿಯಲ್ಲಿ ಹುತಾತ್ಮರಾದವರಿಗೆ ನಾನು ಗೌರವ ನಮನ ಸಲ್ಲಿಸುತ್ತೇನೆ. ನಮ್ಮ ಭದ್ರತಾ ಪಡೆಯ ಧೈರ್ಯ, ಸಾಹಸಗಳ ಮೇಲೆ ನಮಗೆ ನಂಬಿಕೆಯಿದೆ. ಈ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ಭದ್ರತಾ ಪಡೆಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಭಯೋತ್ಪಾದನೆ ವಿರುದ್ಧ ಭಾರತ ತನ್ನ ಹೋರಾಟವನ್ನು ಮುಂದುವರೆಸಲಿದೆ.  ಭಯೋದ್ಪಾದನೆ ದಾಳಿಗೆ ಜವಾಬ್ದಾರರಾಗಿರುವ ಸಂಘಟನೆಗಳು ಖಂಡಿತ ಶಿಕ್ಷೆ ಅನುಭವಿಸಲಿವೆ ಎಂದು ಹೇಳಿದರು.


ಇಂತಹ ದಾಳಿಯ ಮೂಲಕ ಭಾರತವನ್ನು ದುರ್ಬಲಗೊಳಿಸಬಹುದು ಎಂದು ನೆರೆಯ ದೇಶ ಭಾವಿಸಿದ್ದರೆ ಅದನ್ನು ಮರೆತುಬಿಡಲಿ. ನಮ್ಮ ವೀರ ಯೋಧರನ್ನು ಹತ್ಯೆ ಮಾಡಿದವರ ಮೇಲೆ ತಕ್ಕ ಪ್ರತೀಕಾರ ತೀರಿಸಲಾಗುವುದು. ಇಂತಹ ಹೀನ ಕೃತ್ಯಕ್ಕೆ ಅವರು ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆಯ ಸಂದೇಶ ನೀಡಿದರು.


ಯೋಧರ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿ, ದೇಶಕ್ಕೆ ಬೆಂಬಲ ನೀಡಿದ ಎಲ್ಲ ರಾಷ್ಟ್ರಗಳಿಗೂ ಪ್ರಧಾನಿ ಧನ್ಯವಾದಗಳನ್ನು ತಿಳಿಸಿದರು.