ಗುಂಟೂರಿನಲ್ಲಿ ನಾಯ್ಡು ವಿರುದ್ಧ ಪ್ರಧಾನಿ ಮೋದಿ ಗುಟುರು!
ಲೋಕಸಭಾ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಗುಂಟೂರಿನಲ್ಲಿ ಆಯೋಜಿಸಿದ್ದ ರ‍್ಯಾಲಿಯನ್ನುದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಿದರು.
ಗುಂಟೂರು: ಲೋಕಸಭೆ ಚುನಾವಣೆ ಪ್ರಚಾರಕ್ಕೆ ಅಣಿಗೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದಿನಿಂದ ದಕ್ಷಿಣದ ರಾಜ್ಯಗಳಲ್ಲಿ ಪ್ರವಾಸ ಕೈಗೊಂಡಿದ್ದು, ಬಿಜೆಪಿ ಆಯೋಜಿಸಿರುವ ರ‍್ಯಾಲಿಯನ್ನುದ್ದೇಶಿಸಿ ಭಾಷಣ ಮಾಡುವ ಮೂಲಕ ಕಮಲ ಪಕ್ಷದ ಪರ ಚುನಾವಣಾ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಆಂಧ್ರ ಪ್ರದೇಶದ ಗುಂಟೂರಿನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಂಧ್ರ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಬಿರುಸಿನ ಪ್ರವಾಸ ಕೈಗೊಂಡಿರುವ ಮೋದಿ, ಇಂದು ಗುಂಟೂರಿಗೆ ಭೇಟಿನೀಡಿದ ವೇಳೆ ಚಂದ್ರಬಾಬು ನಾಯ್ಡು ಅವರ ವಿರುದ್ಧ ಟೀಕಾ ಪ್ರಹಾರ ಮುಂದುವರೆಸಿದ್ದು, ನಾಯ್ಡು ಅವರು ತಮ್ಮ ಮಾವನವರ ಬೆನ್ನಿಗೆ ಚೂರಿ ಹಾಕಿದ್ದರು ಎಂದು ನೇರವಾಗಿ ಆರೋಪಿಸಿದರು.
1995 ರಲ್ಲಿ ಆಂಧ್ರದ ಮುಖ್ಯಮಂತ್ರಿಯಾಗಬೇಕೆಂಬ ಏಕೈಕ ಉದ್ದೇಶದಿಂದ ಅಂದು ಮುಖ್ಯಮಂತ್ರಿಯಾಗಿದ್ದ ತಮ್ಮ ಮಾವ ಎನ್.ಟಿ. ರಾಮರಾವ್ ಅವರಿಂದ ತೆಲುಗು ದೇಶಂ ಪಕ್ಷವನ್ನು ಅಪಹರಿಸಿದ್ದರು. ಆ ಮೂಲಕ ತಮ್ಮ ಮಾವ ಬೆನ್ನಿಗೆ ಚೂರಿ ಹಾಕಿದ್ದರು ಎಂದು ಮೋದಿ ಟೀಕಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ಆಂಧ್ರ ಪ್ರದೇಶವನ್ನು ಕಾಂಗ್ರೆಸ್ ಮುಕ್ತಗೊಳಿಸಲು ಪಕ್ಷವನ್ನು ಸ್ಥಾಪಿಸಿದರು. ಆದರೆ ಅವರ ಅಳಿಯನಾಗಿ ಚಂದ್ರಬಾಬು ನಾಯ್ಡು ಪದೇ ಪದೇ ಮೈತ್ರಿಯನ್ನು ಬದಲಾಯಿಸುತ್ತಾ, ಚುನಾವಣೆಗಳಲ್ಲಿ ಸೋಲುತ್ತಾ ತಮ್ಮ ಮಾವ ಎನ್ ಟಿಆರ್ ರವರ ಕನಸು, ಆಸೆಗಳನ್ನು ನುಚ್ಚುನೂರು ಮಾಡುತ್ತಿದ್ದಾರೆ. ನಾಯ್ಡು ನನಗಿಂತ ಹಿರಿಯರು ಎಂದು ಪದೇ ಪದೇ ನೆನಪಿಸುತ್ತಾ ಇರುತ್ತಾರೆ, ಅದರಲ್ಲಿ ಸಂಶಯವಿಲ್ಲ. ನೀವು ಹಿರಿಯರಾಗಿರುವುದರಿಂದಲೇ ನಾನು ಎಂದಿಗೂ ನಿಮ್ಮ ಜೊತೆ ಅಗೌರವದಿಂದ ನಡೆದುಕೊಂಡಿಲ್ಲ. ಮೈತ್ರಿ ಬದಲಾಯಿಸುವುದರಲ್ಲಿ ನೀವು ದೊಡ್ಡವರು. ಈ ಕೆಲಸ ತನ್ನಿಂದಾಗದು ಎಂದು ಮೋದಿ ಹೇಳಿದ್ದಾರೆ.
ಎನ್‌ಡಿಎ ಮಿತ್ರಪಕ್ಷವಾಗಿದ್ದ ಆಡಳಿತಾರೂಢ ತೆಲುಗುದೇಶಂ ಪಾರ್ಟಿ(ಟಿಡಿಪಿ) ಯು ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಲು ನಿರಾಕರಿಸಿದ್ದರಿಂದ ಎನ್‌ಡಿಎ ಸಖ್ಯವನ್ನು ತೊರೆದ ಬಳಿಕ ಆಂಧ್ರಪ್ರದೇಶಕ್ಕೆ ಪ್ರಧಾನಿ ಮೋದಿಯವರ ಮೊದಲ ಭೇಟಿ ಇದಾಗಿದೆ.