ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಕೂಡ ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಯಿಂದಲೇ ಕಣಕ್ಕಿಳಿಯಲು ಪ್ರಧಾನಮಂತ್ರಿ ನರೇಂದ್ರ ಮೋದಿ ಸಿದ್ಧತೆ ನಡೆಸಿದ್ದಾರೆ. ಇದೇ ಎಪ್ರಿಲ್ 26 ರಂದು ಮೋದಿ ವಾರಣಾಸಿಯಲ್ಲಿ ತಮ್ಮ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಒಂದು ದಿನ ಮೊದಲು ಮೆಗಾ ರೋಡ್ ಶೋ ನಡೆಸಲಿದ್ದಾರೆ.


COMMERCIAL BREAK
SCROLL TO CONTINUE READING

2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಬಿಂಬಿತರಾಗಿದ್ದ ನರೇಂದ್ರ ಮೋದಿಯವರು, ಆಮ್ ಆದ್ಮಿ ಪಕ್ಷ(ಎಎಪಿ)ದ ಅರವಿಂದ್ ಕೇಜ್ರಿವಾಲ್ ಮತ್ತು ಕಾಂಗ್ರೆಸಿನ ಅಜಯ್ ರಾಯ್ ಅವರನ್ನು ಮಣಿಸಿ ವಾರಣಾಸಿಯ ಸಂಸದರಾಗಿ ಆಯ್ಕೆಯಾಗಿದ್ದರು. 


ಈ ಬಾರಿ ಕೂಡ ವಾರಣಾಸಿಯಲ್ಲಿ ತಮ್ಮ ವಿಜಯದ ಪತಾಕೆ ಹಾರಿಸಲು ಸನ್ನದ್ಧರಾಗಿರುವ ಪ್ರಧಾನಿ ಮೋದಿ, ಗುರುವಾರದಂದು(ಏ.25) ಮೆಗಾ ರೋಡ್ ಶೋ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಪಕ್ಷದ ನಾಯಕರಾದ ಜೆ.ಪಿ. ನಡ್ಡಾ, ಲಕ್ಷ್ಮಣ ಆಚಾರ್ಯ, ಸುನಿಲ್ ಒಜಾ ಮತ್ತು ಅಶುತೋಷ್ ಟಂಡನ್ ಸೇರಿದಂತೆ ಹಲವು ನಾಯಕರು ಸಾಥ್ ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.


ಬಿಜೆಪಿ ಪ್ರಮುಖ ನಾಯಕರ ಸಭೆ ಬಳಿಕ ಬೆನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಲಂಕಾ ಗೇಟ್ ಬಳಿ ಪಂಡಿತ್ ಮದನ್ ಮೋಹನ್ ಮಾಲ್ವಿಯ ಪ್ರತಿಮೆಗೆ ಪ್ರಧಾನಿ ಮೋದಿಯವರಿಂದ ಮಾಲಾರ್ಪಣೆ ಮಾಡುವ ಮೂಲಕ  ರೋಡ್ ಶೋ ಆರಂಭವಾಗಲಿದೆ.


ಮದನ್ಪುರಾ ಮತ್ತು ಸೋನಾರ್ಪುರದ ಪ್ರಮುಖ ಮುಸ್ಲಿಂ ಪ್ರದೇಶಗಳ ಮೂಲಕ ರೋಡ್ ಶೋ ಸಹ ಹಾದು ಹೋಗುಹೋಗಲಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದು, ರೋಡ್ ಶೋ ವೇಳೆ  ಸುಮಾರು 150 ಸ್ಥಳಗಳಲ್ಲಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲಾಗುವುದು ಎನ್ನಲಾಗಿದೆ.


ರೋಡ್ ಶೋ ಸಂಜೆ ಸುಮಾರು 06:30ರವೇಳೆಗೆ ದಶಾಶ್ವಮೇಧ ಘಾಟಿನಲ್ಲಿ ಗಂಗಾ ಆರತಿಯೊಂದಿಗೆ ಕೊನೆಗೊಳ್ಳಲಿದೆ ಎಂದು ಹೇಳಲಾಗಿದೆ. 


ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ಪರ್ಧಿಸುತ್ತಿರುವ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಮೇ 19ರಂದು ಚುನಾವಣಾ ನಡೆಯಲಿದೆ.