ನವದೆಹಲಿ: ಹೆಚ್​.ಡಿ.ದೇವೇಗೌಡ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅಸ್ಸಾಂನ ದಿಬ್ರುಗರ್'ನಲ್ಲಿ ಶಂಕುಸ್ಥಾಪನೆಗೊಂಡಿದ್ದ ದೇಶದ ಅತಿ ಉದ್ದದ ರಸ್ತೆ ಮತ್ತು ರೈಲ್ವೆ ಸೇತುವೆ ಬೋಗಿಬೀಲ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಡಿ.25) ಉದ್ಘಾಟಿಸಲಿದ್ದಾರೆ.


COMMERCIAL BREAK
SCROLL TO CONTINUE READING

1997ರ ಜವವರಿ 22ರಂದು ಅಂದಿನ ಪ್ರಧಾನಿಯಾಗಿದ್ದ ಹೆಚ್.ಡಿ.ದೇವೇಗೌಡ ಅವರು, ಸೇತುವೆ ನಿರ್ಮಾಣ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಬಳಿಕ 2002ರ ಏಪ್ರಿಲ್ 21ರಂದು ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದರು. ಇಂದು(ಡಿಸೆಂಬರ್ 25) ವಾಜಪೇಯಿ ಅವರ ಜನ್ಮ ದಿನವೂ ಆಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಪೂರ್ಣಗೊಂಡಿರುವ ಸೇತುವೆಯನ್ನು ಉದ್ಘಾಟನೆ ಮಾಡಲಿದ್ದಾರೆ.


ಶಂಕುಸ್ಥಾಪನೆಯಾದ 21 ವರ್ಷಗಳ ನಂತರ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಒಟ್ಟು 5,920 ಕೋಟಿ ರೂ. ಮೊತ್ತದ ಯೋಜನೆಯ ಈ ಸೇತುವೆಯೂ ಎರಡು ರೈಲ್ವೆ ಹಳಿ ಮತ್ತು ಅದರ ಮೇಲ್ಭಾಗದಲ್ಲಿ ಮೂರು ಪಥದ ರಸ್ತೆ ಮಾರ್ಗವನ್ನು ಒಳಗೊಂಡಿದ್ದು, 4.94 ಕಿ.ಮೀ. ಉದ್ದವಿರುವ ಈ ಸೇತುವೆ ದೇಶದ ಅತಿದೊಡ್ಡ ರೈಲ್ವೆ ಮತ್ತು ರಸ್ತೆ ಮಾರ್ಗದ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 


ಬೋಗಿಬೀಲ್ ಸೇತುವೆಯು ಅಸ್ಸಾಂನ ದಿಬ್ರುಘರ್‌ನಿಂದ ಅರುಣಾಚಲ ಪ್ರದೇಶದ ಪಾಸಿಘಾಟ್‌ವರೆಗೆ ಸಂಪರ್ಕ ಕಲ್ಪಿಸುವ ಭಾರತದ ಅತಿ ಉದ್ದವಾದ ರೈಲ್‌ರೋಡ್‌ ಸೇತುವೆ ಇದಾಗಿದೆ. ರೈಲು ಮಾರ್ಗವು ಅಸ್ಸಾಂನ ತಿನ್ಸುಕಿಯದಿಂದ ಅರುಣಾಚಲ ಪ್ರದೇಶದ ನಹರ್ಲಾಗುನ್‌ ಟೌನ್‌ಗೆ ಸಂಪರ್ಕ ಕಲ್ಪಿಸುವ ಮೂಲಕ ಪ್ರಯಾಣದ ಅವಧಿಯನ್ನು 10 ಗಂಟೆ ಕಡಿಮೆ ಮಾಡಲಿದೆ. ಅಲ್ಲದೆ ಇದು ಭಾರಿ ಮಿಲಿಟರಿ ಟ್ಯಾಂಕುಗಳ ಸಂಚಾರವನ್ನು ತಡೆದುಕೊಳ್ಳುವಷ್ಟು ಪ್ರಬಲವಾಗಿದೆ.