ರಾಂಚಿ: ರಾಷ್ಟ್ರದಾದ್ಯಂತದ ರೈತರಿಗೆ ಅನುಕೂಲವಾಗುವ 'ಪ್ರಧಾನ ಮಂತ್ರಿ ಕಿಸಾನ್ ಮಾನ್‍ಧನ್ ಯೋಜನೆ'ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ವಿದ್ಯುಕ್ತ ಚಾಲನೆ ನೀಡಲಿದ್ದಾರೆ.


COMMERCIAL BREAK
SCROLL TO CONTINUE READING

'ಪ್ರಧಾನ್ ಮಂತ್ರಿ ಕಿಸಾನ್ ಮಾನ್‍ಧನ್ ಯೋಜನೆ', ರೈತರಿಗೆ ಸಾಮಾಜಿಕ ಭದ್ರತೆ ಒದಗಿಸಲು ಪರಿಚಯಿಸಲಾಗುವ ಮಾಸಿಕ ಪಿಂಚಣಿ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ, ಎರಡು ಹೆಕ್ಟೇರ್ ವರೆಗೆ ಭೂಮಿಯನ್ನು ಹೊಂದಿರುವ 18 ರಿಂದ 40 ವರ್ಷದೊಳಗಿನ ರೈತರಿಗೆ 60 ವರ್ಷ ತುಂಬಿದ ನಂತರ ಮಾಸಿಕ 3,000 ರೂ. ಪಿಂಚಣಿ ದೊರೆಯಲಿದೆ.


ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇದೇ ಸಮಯದಲ್ಲಿ 'ಪ್ರಧಾನಮಂತ್ರಿ ಲಘು ವ್ಯಾಫಾರಿಕ್ ಮಾನ್‍ಧನ್ ಯೋಜನಾ' ಮತ್ತು 'ಸ್ವರೋಜರ್ ಪಿಂಚಣಿ' ಯೋಜನೆಗಳಿಗೂ ಚಾಲನೆ ನೀಡಲಿದ್ದಾರೆ. ಇದರ ಅಡಿಯಲ್ಲಿ 18 ರಿಂದ 40 ವರ್ಷದೊಳಗಿನ ಫಲಾನುಭವಿಗಳಿಗೆ 60 ವರ್ಷ ತುಂಬಿದ ನಂತರ ತಿಂಗಳಿಗೆ 3,000 ರೂ. ಪಿಂಚಣಿ ಸಿಗಲಿದೆ.


2019 ರ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿಗೆ ಜಾರ್ಖಂಡ್‌ಗೆ ಭೇಟಿ ನೀಡುತ್ತಿದ್ದಾರೆ.


ಪ್ರಧಾನಿ ಮೋದಿ ತಮ್ಮ ಭೇಟಿಯ ವೇಳೆ ಜಾರ್ಖಂಡ್‌ನ ಹೊಸ ವಿಧಾನಸಭೆ ಕಟ್ಟಡವನ್ನು ಮತ್ತು ಗಂಗಾ ನದಿಯಲ್ಲಿ ಒಳನಾಡಿನ ಜಲಮಾರ್ಗ ಪ್ರಾಧಿಕಾರವು 290 ಕೋಟಿ ರೂ.ಗಳ ವೆಚ್ಚದಲ್ಲಿ ಸಾಹಿಬ್‌ಗಂಜ್‌ನಲ್ಲಿ ನಿರ್ಮಿಸಿದ ಎರಡನೇ ಮಲ್ಟಿ-ಮೋಡಲ್ ಟರ್ಮಿನಲ್ ಅನ್ನು ಉದ್ಘಾಟಿಸಲಿದ್ದಾರೆ.


ಜಲ್ ಮಾರ್ಗ ವಿಕಾಸ್ ಪ್ರಾಜೆಕ್ಟ್ (ಜೆಎಂವಿಪಿ) ಅಡಿಯಲ್ಲಿ ಗಂಗಾ ನದಿಯಲ್ಲಿ ನಿರ್ಮಿಸಲಾಗಿರುವ ಮಲ್ಟಿ-ಮೋಡಲ್ ಟರ್ಮಿನಲ್ ಅನ್ನು ಎರಡು ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಲಾಯಿತು. ರಾಜಮಹಲ್ ಪ್ರದೇಶದ ಸ್ಥಳೀಯ ಗಣಿಗಳಿಂದ ವಿವಿಧ ಉಷ್ಣ ವಿದ್ಯುತ್ ಸ್ಥಾವರಗಳಿಗೆ ದೇಶೀಯ ಕಲ್ಲಿದ್ದಲನ್ನು ಸಾಗಿಸುವಲ್ಲಿ ಟರ್ಮಿನಲ್ ಮಹತ್ವದ ಪಾತ್ರ ವಹಿಸುತ್ತದೆ. ಜಲಮಾರ್ಗಗಳ ಮೂಲಕ ಇಂಡೋ-ನೇಪಾಳ ಸರಕು ಸಂಪರ್ಕವನ್ನು ಒದಗಿಸುತ್ತದೆ. ಕನಿಷ್ಠ 500 ನೇರ ಉದ್ಯೋಗಾವಕಾಶಗಳು ಮತ್ತು ಸಾವಿರಾರು ಪರೋಕ್ಷ ಅವಕಾಶಗಳನ್ನು ಸೃಷ್ಟಿಸಲು ಇದು ಸಹಾಯ ಮಾಡುತ್ತದೆ.


ಆನ್‌ಲೈನ್ ಮಾಧ್ಯಮದ ಮೂಲಕ ದೇಶಾದ್ಯಂತ 462 ಏಕಲವ್ಯ ಮಾದರಿ ಶಾಲೆಗಳಿಗೆ ಪ್ರಧಾನಿ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.