ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯ ಪ್ರವಾಸ ಮುಂದೂಡಿಕೆ
ಒಂದು ದಿನದ ಮಟ್ಟಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರಾಜ್ಯ ಪ್ರವಾಸ ಮುಂದೂಡಿದ ಬಿಜೆಪಿ.
ಬೆಂಗಳೂರು: ಎಪ್ರಿಲ್ 8ರಂದು ರಾಜ್ಯದ ಚಿತ್ರದುರ್ಗ ಹಾಗೂ ಮೈಸೂರು ಭಾಗದಲ್ಲಿ ಆಯೋಜಿಸಲಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರ‍್ಯಾಲಿಯನ್ನು ಒಂದು ದಿನದ ಮಟ್ಟಿಗೆ ಅಂದರೆ ಎಪ್ರಿಲ್ 9ಕ್ಕೆ ಮುಂದೂಡಲಾಗಿದೆ.
ಪ್ರಧಾನಿ ಮೋದಿ ಎಪ್ರಿಲ್ 8ರಂದು(ಸೋಮವಾರ) ಕೋಟೆ ನಾಡು ಚಿತ್ರದುರ್ಗ ಮತ್ತು ಮಲ್ಲಿಗೆ ನಗರಿ ಮೈಸೂರಿನಲ್ಲಿ ರ‍್ಯಾಲಿ ನಡೆಸಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಬೇಕಿತ್ತು. ಆದರೆ ಶನಿವಾರ ಯುಗಾದಿ ಹಬ್ಬ ಇರುವುದರಿಂದ ಬೇರೆ ಬೇರೆ ಊರುಗಳಿಗೆ ತೆರಳುವುದರಿಂದ, ಹಬ್ಬದ ಮರುದಿನವೇ ಸಮಾವೇಶ ನಡೆಸಿದರೆ ಸಮಾವೇಶಕ್ಕೆ ಹೆಚ್ಚಿನ ಜನ ಆಗಮಿಸಲು ಕಷ್ಟವಾಗಬಹುದು ಎಂದು ರ‍್ಯಾಲಿಯನ್ನು ಮಂಗಳವಾರಕ್ಕೆ ನಿಗದಿಗೊಳಿಸಲಾಗಿದೆ.
ಏಪ್ರಿಲ್ 9 ರಂದು ಬೆಳಗ್ಗೆ ಮೈಸೂರಿನಲ್ಲಿ ಮತ್ತು ಸಂಜೆ ಚಿತ್ರದುರ್ಗದಲ್ಲಿ ಪ್ರಧಾನಿ ಮೋದಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ.
ಏ. 9ಕ್ಕೆ ಚಿತ್ರದುರ್ಗ, ಮೈಸೂರಿನಲ್ಲಿ, ಏ.13ಕ್ಕೆ ಮಂಗಳೂರು, ಬೆಂಗಳೂರಿನಲ್ಲಿ ಹಾಗೂ ಏ.18ಕ್ಕೆ ಚಿಕ್ಕೋಡಿ ಹಾಗೂ ಗಂಗಾವತಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ರ‍್ಯಾಲಿ ನಡೆಸಲಿದ್ದಾರೆ.