ಓಡಿಷಾಗೆ 500 ಕೋಟಿ ರೂ. ಆರ್ಥಿಕ ನೆರವು ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ
ಓಡಿಷಾಗೂ ಮೊದಲು ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದಲ್ಲಿ ಅಮ್ಫನ್ ಚಂಡಮಾರುತದ ಹೊಡೆತಕ್ಕೆ ಒಳಗಾದ ಪ್ರದೇಶಗಳ ವಾಯು ಸಮೀಕ್ಷೆ ನಡೆಸಿ, ರಾಜ್ಯಕ್ಕೆ 1000 ಕೋಟಿ ರೂ. ಪರಿಹಾರ ಘೋಷಿಸಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಮ್ಫನ್ ಹೊಡೆತಕ್ಕೆ ಒಳಗಾದ ಓಡಿಷಾ ರಾಜ್ಯದ ವಾಯು ಸಮೀಕ್ಷೆ ನಡೆಸಿ, ನಂತರ 500 ಕೋಟಿ ರೂ.ಗಳ ಆರ್ಥಿಕ ನೆರವು ಘೋಷಿಸಿದ್ದಾರೆ. ಜೊತೆಗೆ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡವರ ಕುಟುಂಬ ಸದಸ್ಯರಿಗೆ 2 ಲಕ್ಷ ಪರಿಹಾರ ಹಾಗೂ ಗಾಯಗೊಂಡವರಿಗೆ 50 ಸಾವಿರ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
ಓಡಿಷಾಗೂ ಮೊದಲು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಅಮ್ಫನ್ ಚಂಡಮಾರುತಕ್ಕೆ ಹಾನಿಗೊಳಗಾದ ಜಿಲ್ಲೆಗಳು ಹಾಗು ಪ್ರದೇಶಗಳ ವಾಯು ಸಮೀಕ್ಷೆ ನಡೆಸಿದ್ದಾರೆ. ಬಳಿಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ರಾಜ್ಯದ ರಾಜ್ಯಪಾಲರ ಜೊತೆಗೆ ಬಷೀರ್ ಘಾಟ್ ನಲ್ಲಿ ಸಭೆ ನಡೆಸಿ ರಾಜ್ಯಕ್ಕೆ 1000 ಕೋಟಿ ರೂ. ನೆರವು ಘೋಷಿಸಿದ್ದಾರೆ. ಜೊತೆಗೆ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಮೃತಪಟ್ಟವರ ಕುಟುಂಬ ಸದಸ್ಯರಿಗೆ ತಲಾ 2 ಲಕ್ಷ ಹಾಗೂ ಗಾಯಗೊಂಡವರಿಗೆ 50 ಸಾವಿರ ಪರಿಹಾರ ನೀಡುವುದಾಗಿ ಘೋಷಿಸಿದ್ದರು.
ಓಡಿಷಾದಲ್ಲಿ ಸಮೀಕ್ಷೆ ನಡೆಸಿದ ಬಳಿಕ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, "ಭಾರತ ಸರ್ಕಾರ ಓಡಿಷಾ ರಾಜ್ಯಕ್ಕೆ 500 ಕೋಟಿ ರೂ.ಗಳ ಆರ್ಥಿಕ ನೆರವು ನೀಡಲಿದೆ. ಸಂಪೂರ್ಣ ಸಮೀಕ್ಷೆ ಹಾಗೂ ಪುನರ್ವಸತಿ ಯೋಜನೆಯ ಅನುಷ್ಠಾನದ ಬಳಿಕ ಮುಂದೆಯೂ ಕೂಡ ಸರ್ಕಾರ ಓಡಿಷಾ ಸರ್ಕಾರಕ್ಕೆ ತನ್ನ ಸಹಾಯ ಒದಗಿಸಲಿದೆ ಹಾಗೂ ಈ ಸಂಕಷ್ಟದ ಪರಿಸ್ಥಿತಿಯಿಂದ ಹೊರಬೀಳಲು ತನ್ನ ಸಂಪೂರ್ಣ ಸಹಾಯ ಒದಗಿಸಲಿದೆ" ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಅಮ್ಫನ್ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ, ಭುವನೇಶ್ವರದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ರಾಜ್ಯ ಸಚಿವರೊಂದಿಗೆ ಪರಿಶೀಲನಾ ಸಭೆ ನಡೆಸಿದ್ದಾರೆ, ಈ ಸಭೆಯಲ್ಲಿ ನವೀನ ಪಟ್ನಾಯಕ್, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ ಹಾಗೂ ಪ್ರತಾಪ್ ಸಾರಂಗಿ ಕೂಡ ಉಪಸ್ಥಿತರಿದ್ದರು.
ಚಂಡಮಾರುತದ ಪರಿಣಾಮ ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಹಾನಿ ಉಂಟಾಗಿದೆ. ರಾಜ್ಯದಲ್ಲಿ ಇದುವರೆಗೆ ಈ ಚಂಡಮಾರುತದ ಹೊಡೆತಕ್ಕೆ 80 ಜನರು ಬಲಿಯಾಗಿದ್ದಾರೆ. ಉತ್ತರ ಹಾಗೂ ದಕ್ಷಿಣ 24 ಪರಗನಾ, ಪೂರ್ವ ಹಾಗೂ ಪಶ್ಚಿಮ ಮೇದಿನಾಪುರ್, ಕೊಲ್ಕತ್ತಾ, ಹಾವಡಾ ಹಾಗೂ ಹೂಗ್ಲಿ ಜಿಲ್ಲೆಯಳಲ್ಲಿ ಮೂಲಭೂತ ಕಟ್ಟಡಗಳು, ಸಾರ್ವಜನಿಕ ಹಾಗೂ ಖಾಸಗಿ ಸಂಪತ್ತಿಗಳಿಗೆ ಭಾರಿ ಹಾನಿ ಉಂಟಾಗಿದೆ.