ನವದೆಹಲಿ: ಪಾಕಿಸ್ತಾನದ ಬಾಲಾಕೋಟ್ ಎಂಬಲ್ಲಿ ಉಗ್ರರ ತರಬೇತಿ ಶಿಬಿರಗಳ ಮೇಲೆ ಭಾರತೀಯ ವಾಯುಸೇನೆ ನಡೆಸಿದ ದಾಳಿಯ ಬಳಿಕ ಪ್ರಧಾನಿ ನರೇಂದ್ರ ಮೋದಿಯ ಜನಪ್ರಿಯತೆ ಮತ್ತಷ್ಟು ಹೆಚ್ಚಿದೆಯಲ್ಲದೆ, ಮೋದಿ ನೇತೃತ್ವದ ಸರ್ಕಾರದ ಆಡಳಿತದ ಬಗ್ಗೆ ಜನರಲ್ಲಿದ್ದ ಸಂತುಪ್ತಿ ಭಾವ ದ್ವಿಗುಣಗೊಂಡಿದೆ. ಅಂತೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ಜನಪ್ರಿಯತೆ ಪ್ರಮಾಣ ಇಳಿಕೆಯಾಗಿದೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ. 


COMMERCIAL BREAK
SCROLL TO CONTINUE READING

ಸಿ ವೋಟರ್-IANS ಸ್ಟೇಟ್ ಆಫ್ ದ ನೇಷನ್'ನ ಅಭಿಪ್ರಾಯ ಸಮೀಕ್ಷೆ ಪ್ರಕಾರ, ಮಾರ್ಚ್ 7 ರಂದು ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಶೇ.51ರಷ್ಟು ಜನರು ಮೋದಿ ಸರ್ಕಾರದ ಆಡಳಿತ ತೃಪ್ತಿ ತಂದಿದೆ ಎಂದಿದ್ದಾರೆ. ಇದಕ್ಕೂ ಮುನ್ನ ಜನವರಿ 1ರಂದು ನಡೆಸಿದ ಸಮೀಕ್ಷೆಯಲ್ಲಿ ಈ ಸಂಖ್ಯೆ ಶೇ.36 ಪ್ರತಿಶತದಷ್ಟಿತ್ತು. ಅದೇ ಮಾರ್ಚ್ 7 ರ ನಿವ್ವಳ ಅನುಮೋದನೆ ರೇಟಿಂಗ್ನಲ್ಲಿ ತೀವ್ರ ಏರಿಕೆ ಕಂಡುಬಂದಿದ್ದು, ಈ ವರ್ಷದ ಆರಂಭದಲ್ಲಿ ಶೇ.32ರಷ್ಟಿದ್ದ ರೇಟಿಂಗ್, ಬಳಿಕ ದ್ವಿಗುಣಗೊಂಡು ಶೇ.62 ಪ್ರತಿಶತಕ್ಕೆ ಏರಿಕೆಯಾಗಿದೆ ಎನ್ನಲಾಗಿದೆ. 


ಸಿ ವೋಟರ್ ಚುನಾವಣಾ ವಿಶ್ಲೇಷಕ ಯಶವಂತ್ ದೇಶ್ಮುಖ್ ಇತ್ತೀಚಿನ ಟ್ರೆಂಡ್ ಬಗ್ಗೆ ವಿವರಿಸುತ್ತಾ, ಜನವರಿ 1 ರಿಂದ ಮಾರ್ಚ್ 7ರ ನಡುವಿನ ಎರಡು ಮುಖ್ಯ ಘಟನೆಗಳು ಸಂಭವಿಸಿದವು. ಒಂದು ಕೇಂದ್ರ ಬಜೆಟ್, ಮತ್ತೊಂದು ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನದ ಉಗ್ರರ ಶಿಬಿರಗಳ ಮೇಲೆ ನಡೆದ ವಾಯು ದಾಳಿ. "ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಬಳಿಕ ನಿವ್ವಳ ರೇಟಿಂಗ್ ನಲ್ಲಿ ಕೊಂಚ ಏರಿಕೆ ಕಂಡುಬಂದಿತ್ತು. ಆದರೆ, ಕೇವಲ ಬಜೆಟ್ ನಿಂದ ಎನ್ ಡಿಎ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ದೊರೆತಂತೆ ಕಾಣಲಿಲ್ಲ. ಆದರೆ ಪಾಕಿಸ್ತಾನದ ಬಾಲಾಕೋಟ್ನಲ್ಲಿ ನಡೆದ ವಾಯು ದಾಳಿ ಬಳಿಕ ರೇಟಿಂಗ್ ನಲ್ಲಿ ಮಹತ್ವಪೂರ್ಣ ಬದಲಾವಣೆಯಾಗಿದ್ದು ಸಾಕಷ್ಟು ಹೆಚ್ಚಳವಾಗಿದೆ" ಎಂದಿದ್ದಾರೆ.


ಒಂದೆಡೆ ಪಾಕಿಸ್ತಾನದಲ್ಲಿ ನಡೆಸಿದ ವಾಯು ದಾಳಿ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯಲ್ಲಿ ಏರಿಕೆ ಕಂಡಿದೆ. ಆದರೆ ಮತ್ತೊಂದೆಡೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ  ವರ್ಷದ ಆರಂಭದಲ್ಲಿ ಶೇ.23ರಷ್ಟಿದ್ದ ರೇಟಿಂಗ್ ಬಾಲಾಕೋಟ್ ವಾಯುದಾಳಿ ಬಳಿಕ ಶೇ.8ಕ್ಕೆ ಕುಸಿದಿದೆ. ಆದರೆ, ಚುನಾವಣೆ ಪ್ರಚಾರ ಆರಂಭವಾದ ಬಳಿಕ ರೇಟಿಂಗ್ ನಲ್ಲಿ ಬದಲಾವಣೆಯಾಗಲಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ದೇಶ್ಮುಖ್ ಹೇಳಿದ್ದಾರೆ.