ಕೇರಳ: ಕಳೆದ ಕೆಲ ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಕೇರಳದಲ್ಲಿ ಉಂಟಾಗಿರುವ ಪ್ರವಾಹಕ್ಕೆ 300ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. 


COMMERCIAL BREAK
SCROLL TO CONTINUE READING

ಶುಕ್ರವಾರ ರಾತ್ರಿಯೇ ಕೇರಳಕ್ಕೆ ಆಗಮಿಸಿರುವ ಮೋದಿ, ಇಂದು ಕೊಚ್ಚಿಗೆ ಬಂದಿಳಿದಿದ್ದು, ಕೇರಳದ ಪರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ, ರಾಜ್ಯದಲ್ಲಿ ಸಂಭವಿಸಿರುವ ಅನಾಹುತವನ್ನು ಅರಿಯುವ ಪ್ರಯತ್ನ ಮಾಡಲಿದ್ದಾರೆ. ನಂತರ ನೆರೆ ಸಂತ್ರಸ್ತರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಈ ಪರಿಶೀಲನೆ ಬಳಿಕ ಪ್ರಧಾನಿ, ರಾಜ್ಯಕ್ಕೆ ಹೆಚ್ಚುವರಿ ಪರಿಹಾರ ಪ್ರಕಟಿಸುವ ನಿರೀಕ್ಷೆ ಇದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್ ಹಾಗೂ ಇತರೆ ಅಧಿಕಾರಿಗಳು ಸಾಥ್ ನೀಡಿದ್ದಾರೆ.


ಇಂದು ಬ್ಲಿಗ್ಗೆ 6.30ಕ್ಕೇ ವೈಮಾನಿಕ ಸಮೀಕ್ಷೆ ನಡೆಸಲು ಸಿದ್ಧತೆ ನಡೆಸಲಾಗಿತ್ತಾದರೂ ಹವಾಮಾನ ವೈಪರೀತ್ಯದಿಂದ ರದ್ದುಗೊಳಿಸಲಾಗಿತ್ತು. ನಂತರ ತುರ್ತು ಕ್ಯಾಬಿನೆಟ್ ಸಭೆ ನಡೆಸಿದ ಪ್ರಧಾನಿ ಮೋದಿ ಪ್ರವಾಹ ಪರಿಹಾರ ಕಾರ್ಯಕ್ಕಾಗಿ 500 ಕೋಟಿ ರೂ.ಗಳನ್ನು ಘೋಷಣೆ ಮಾಡಿದ್ದಾರೆ. 


ಈ ಮಧ್ಯೆ ಭಾರತೀಯ ಸ್ಟೇಟ್ ಬ್ಯಾಂಕ್ ಸಹ 2 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ದೇಣಿಗೆ ನೀಡಿದೆ. ಅಲ್ಲದೆ, ಕೇರಳದಲ್ಲಿ ಇದುವರೆಗೂ ಬ್ಯಾಂಕ್ ಸೇವೆಗಳಿಗೆ ಚಾಲ್ತಿಯಲ್ಲಿದ್ದ ಸೇವಾ ಶುಲ್ಕ ಮತ್ತು ದರಗಳನ್ನು ಮನ್ನಾ ಮಾಡಿದೆ. 



ಅಷ್ಟೇ ಅಲ್ಲದೆ, ಇನ್ನು ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ 25 ಕೋಟಿ ರೂ.ಗಳು ಮತ್ತು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹತ್ತು ಕೋಟಿ ರೂ.ಗಳ ನೆರವು ಘೋಷಣೆ ಮಾಡಿದ್ದಾರೆ.




ಇದುವರೆಗೂ ಪ್ರವಾಹದಲ್ಲಿ 324 ಮಂದಿ ಮೃತಪಟ್ಟಿದ್ದು, ಎರಡು ಲಕ್ಷ ಮಂದಿ ನಿರ್ಗತಿಕರಾಗಿದ್ದಾರೆ. ಇಲ್ಲಿಯವರೆಗೆ 42 ವಾಯು ಸೇನೆ, 16 ಭೂ ಸೇನೆ, 28 ಕೋಸ್ಟ್ ಗಾರ್ಡ್ ಹಾಗೂ 39 ಎನ್'ಡಿಆರ್'ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ. ಇಂದು ಮತ್ತು ನಾಳೆಯೂ ಸಹ ಭಾರೀ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ನೆಚರಿಕೆ ನೀಡಿದೆ.