ಬೆಂಗಳೂರು: ದೇಶದ ಪ್ರಥಮ ಗೃಹ ಸಚಿವ ಸದೃಢ ನಾಯಕತ್ವ ಹಾಗೂ ದಿಟ್ಟ ನಿರ್ಧಾರಗಳಿಂದ ‘ಉಕ್ಕಿನ ಮನುಷ್ಯ’ ಎಂದೇ ಜನಪ್ರಿಯರಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಸ್ಮರಣಾರ್ಥ ನಿರ್ಮಿಸಲಾಗಿರುವ ವಿಶ್ವದಲ್ಲಿಯೇ ಅತೀ ಎತ್ತರದ ಪ್ರತಿಮೆ ಎಂಬ ಹಿರಿಮೆಗೆ ಪಾತ್ರವಾಗಲಿರುವ 182 ಮೀಟರ್ ಎತ್ತರದ ಪ್ರತಿಮೆಗೆ ಕಂಚಿನ ಹಾಳೆಗಳನ್ನು ಜೋಡಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ಈ ‘ಏಕತೆಯ ಪ್ರತಿಮೆ’ ಅ. 31ರಂದು ಸರ್ದಾರ್ ಅವರ ಹುಟ್ಟುಹಬ್ಬದಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಅನಾವರಣಗೊಳ್ಳಲಿದೆ.
 
ಸಾಕರವಾಗುತ್ತಿರುವ ಮೋದಿ ಕನಸು:
ಉಕ್ಕಿನ ಮನುಷ್ಯನ ಏಕತಾ ಪ್ರತಿಮೆ ನಿರ್ಮಾಣ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ. ಗುಜರಾತ್ ಮೂಲದ ಸರ್ದಾರ್ ಅವರ ಬೃಹತ್ ಪ್ರತಿಮೆ ನಿರ್ಮಿಸಬೇಕೆಂಬ ಕನಸಿನೊಂದಿಗೆ ಮೋದಿ 2013ರಲ್ಲಿ ಗುಜರಾತ್ ಮುಖ್ಯಮಂತ್ರಿ ಆಗಿದ್ದ ವೇಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆ ಕನಸೀಗ ಸಾಕಾರವಾಗುತ್ತಿದೆ.


COMMERCIAL BREAK
SCROLL TO CONTINUE READING

ನರ್ಮದಾ ಜಿಲ್ಲೆಯ ನರ್ಮದಾ ಡ್ಯಾಮ್‌ನಿಂದ 1 ಕಿ.ಮೀ ದೂರದಲ್ಲಿರುವ  ‘ಸಾಧು ಬೆಟ್’ ದ್ವೀಪದಲ್ಲಿ ಯೋಜನಾ ಸ್ಥಳವಿದೆ. ಈ ಪ್ರತಿಮೆ ನಿರ್ಮಾಣದ ಹಿಂದೆ 250 ಎಂಜಿನಿಯರ್‌ಗಳು ಹಾಗೂ 3,400 ಕಾರ್ಮಿಕರ ಸತತ ಪರಿಶ್ರಮದ ಫಲವಿದೆ.


182 ಮೀಟರ್ ಎತ್ತರದ ರಹಸ್ಯ?
ಗುಜರಾತ್‌ನಲ್ಲಿ 182 ವಿಧಾನಸಭೆ ಕ್ಷೇತ್ರಗಳಿದ್ದು, ಇದರ ರೂಪಕವಾಗಿ ಪ್ರತಿಮೆಯ ಎತ್ತರವನ್ನು ಇಷ್ಟಕ್ಕೇ ನಿರ್ದಿಷ್ಟಗೊಳಿಸಲಾಗಿದೆ. ಅಂದಹಾಗೆ, 7 ಕಿ.ಮೀ ದೂರದಿಂದಲೇ ಪ್ರತಿಮೆಯನ್ನು ಗುರುತಿಸಬಹುದಾಗಿದೆ ಎಂಬುದು ವಿಶೇಷ.



  • ಯೋಜನೆಗೆ ಖರ್ಚಾದ ಮೊತ್ತ- 2,389 ಕೋಟಿ ರೂ. 

  • ಮುಂದಿನ ದಿನಗಳಲ್ಲಿ ಈ ತಾಣಕ್ಕೆ ಪ್ರತಿದಿನ ಭೇಟಿ ನೀಡುವ ಪ್ರವಾಸಿಗರ ಅಂದಾಜು ಸಂಖ್ಯೆ- 15,000 

  • ಮೊದಲ ಹಂತದ ಯೋಜನಾ ವಿಸ್ತಾರ ಪ್ರದೇಶ- 19,000 ಚ.ಮೀ.

  • ಬಳಸಿರುವ ಸಿಮೆಂಟ್- 90,000 ಟನ್

  • ಬಳಸಿರುವ ಉಕ್ಕು- 25,000 ಟನ್


ಏನೆಲ್ಲಾ ಇಲ್ಲಿದೆ?
– 52 ಕೊಠಡಿಗಳ ‘ಶ್ರೇಷ್ಠ ಭಾರತ್ ಭವನ್’ ಹೋಟೆಲ್, 250 ಟೆಂಟ್‌ಗಳಿರುವ ‘ಟೆಂಟ್ ಸಿಟಿ’.
– ಸೆಲ್ಫಿ ಪಾಯಿಂಟ್, ರೆಸ್ಟೋರೆಂಟ್‌ಗಳು, ಫೆರ್ರಿ ಸೇವೆ, ಬೋಟಿಂಗ್ ಸೌಕರ್ಯ.
– 306 ಮೀಟರ್ ಉದ್ದದ ಮಾರ್ಬಲ್ ಫ್ಲೋರಿಂಗ್ ವಾಕ್‌ವೇ. ವೀಕ್ಷಣಾ ಗ್ಯಾಲರಿ.
– ಪಟೇಲರಿಗೆ ಸಂಬಂಧಿಸಿದ ಮ್ಯೂಸಿಯಂ. ಆಡಿಯೊ-ವಿಡಿಯೊ ಗ್ಯಾಲರಿ, ಸಂಶೋಧನಾ ಕೇಂದ್ರ.
– ಪ್ರತಿಮೆಗೆ ಲೇಸರ್ ಬೆಳಕಿನ ವ್ಯವಸ್ಥೆ ಹಾಗೂ ಧ್ವನಿ ಪ್ರದರ್ಶನ.
 
ಪ್ರತಿಮೆ ನಿರ್ಮಾಣಕ್ಕೆ 5000 ಕಂಚಿನ ಹಾಳೆಗಳ ಬಳಕೆ:
ಪ್ರತಿಮೆ ನಿರ್ಮಾಣಕ್ಕೆ ಕಾಂಕ್ರಿಟ್ ಮತ್ತು ಉಕ್ಕು ಬಳಸಲಾಗಿದ್ದು, ಹೊರ ಮೈಗೆ ಕಂಚು ಪ್ಯಾನೆಲ್‌ಗಳನ್ನು ಉಪಯೋಗಿಸಲಾಗಿದೆ. ಪ್ರತಿಮೆಯ ಉಕ್ಕಿನ ಕೆಲಸವನ್ನು ಮಲೇಷ್ಯಾ ಮೂಲದ ಎವರ್‌ಸೆಂಡಾಯಿ ಕಂಪನಿಗೆ ವಹಿಸಲಾಗಿದೆ. ಜಗತ್ತಿನ ಅತಿ ಎತ್ತರದ ಕಟ್ಟಡ ಎಂದೇ ಖ್ಯಾತಿಯಾಗಿರುವ ದುಬೈನ ಬುರ್ಜ್- ಖಲೀಫಾವನ್ನು ಇದೇ ನಿರ್ಮಿಸಿದೆ. ಹಾಗೆಯೇ ಪ್ರತಿಮೆಯ ಕಂಚಿನ ಕೆಲಸವನ್ನು ಟಿಕ್ಯೂ ಆರ್ಟ್ ಫೌಂಡ್ರಿ ಕೈಗೊಂಡಿದ್ದು, ಒಟ್ಟು 5,000 ಕಂಚು ಪ್ಯಾನೆಲ್‌ಗಳನ್ನು ಬಳಸಿಕೊಳ್ಳಲಾಗಿದೆ. ಇದರ ಮೇಲ್ವಿಚಾರಣೆಯನ್ನು ಕಲಾವಿದ ರಾಮ್ ಸುತಾರ್ ವಹಿಸಿಕೊಂಡಿದ್ದಾರೆ.