ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟದ ಪ್ರಚಂಡ ಗೆಲುವಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ನಾಳೆ(ಮೇ.27) ವಾರಣಾಸಿಗೆ ಭೇಟಿ ನೀಡಲಿದ್ದಾರೆ. ಇದೇ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಪ್ರಧಾನಿಗೆ ಸಾಥ್ ನೀಡಲಿದ್ದಾರೆ. ಅಂತೆಯೇ ಪ್ರಧಾನಿ ಮೋದಿ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಸೋಮವಾರ ಬೆಳಿಗ್ಗೆ 9 ಗಂಟೆಗೆ ವಾರಣಾಸಿ ತಲುಪಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಬಳಿಕ ಕಾರಿನಲ್ಲಿ ಅಮಿತ್ ಶಾ ಜೊತೆಗೂಡಿ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ತೆರಳಲಿದ್ದಾರೆ. ಇದೇ ವೇಳೆ ಕಾಶಿಯ ಜನತೆ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ ಕೋರಲಿದ್ದಾರೆ. ಆದರೆ, ಇದನ್ನು ಬಿಜೆಪಿ ರೋಡ್ ಶೋ ಎಂದು ಅಧಿಕೃತವಾಗಿ ಹೇಳಿಲ್ಲ.


ಬಳಿಕ ಕಾಶಿಯ ಕಾಲಭೈರವ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಮೋದಿ-ಶಾ ಜೋಡಿ, ಅಲ್ಲಿಂದ ವಾರಣಾಸಿಯ ಲಾಲ್ಪುರದಲ್ಲಿರುವ ದೀನ ದಯಾಳ್ ಹ್ಯಾಂಡಿಕ್ರಾಫ್ಟ್ ಕಾಂಪ್ಲೆಕ್ಸ್ ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ನೇರ ಸಂವಾದದಲ್ಲಿ ಪಾಲ್ಗೊಳ್ಳಲಿರುವ ಮೋದಿ, ಮಧ್ಯಾಹ್ನ 12.30ಕ್ಕೆ ವಾರಣಾಸಿಯಿಂದ ದೆಹಲಿಗೆ ಮರಳಲಿದ್ದಾರೆ.


ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಇಂದು ಸಂಜೆ ನಾಲ್ಕು ಗಂಟೆಗೇ ವಾರಣಾಸಿಗೆ ತೆರಳಲಿರುವ ಅಮಿತ್ ಶಾ, ಪೂರ್ವ ಸಿದ್ಧತೆಗಳ ಮೇಲ್ವಿಚಾರಣೆ ನಡೆಸಲಿದ್ದಾರೆ.