ನವದೆಹಲಿ: ಭಾರತದ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ, ದೇಶದ ಯುವಜನತೆಗೆ ಶಕ್ತಿಯಾದ ಸ್ವಾಮಿ ವಿವೇಕಾನಂದ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಮಿ ವಿವೇಕಾನಂದರಿಗೆ ಭಾವಪೂರ್ಣ ನಮನ ಸಲ್ಲಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದೇ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಜಯನತಿ ಅಂಗವಾಗಿ ವಿಶೇಷ ವೀಡಿಯೋ ಬಿಡುಗಡೆ ಮಾಡಿರುವ ಪ್ರಧಾನಿ ಮೋದಿ ದೇಶದ ಜನತೆಗೆ ಸಂದೇಶ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, " 'ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ...' ಸ್ವಾಮಿ ವಿವೇಕಾನಂದರ ಜಯಂತಿಯಂದು ನೆನಪಿಸಿಕೊಳ್ಳುವುದು ಈ ಶಕ್ತಿಶಾಲಿ ಪದಗಳನ್ನು ಮತ್ತು ಅವರ ನುಡಿಗಳನ್ನು ನೆನೆಯುವುದು ಅವರಿಗೆ  ನಾವು ಸಲ್ಲಿಸುವ ಗೌರವ. ವಿವೇಕಾಂದರು ಸೇವಾ ಆದರ್ಶ ಮತ್ತು ಪರಿತ್ಯಜತೆಗೆ ಹೆಚ್ಚು ಒತ್ತು ನೀಡಿದ್ದರು. ಅವರು ಯುವಶಕ್ತಿಯಲ್ಲಿ ಹೆಚ್ಚು ನಂಬಿಕೆ ಇಟ್ಟಿದ್ದರು" ಎಂದು ಹೇಳಿದ್ದಾರೆ. 



"ಸ್ವಾಮಿ ವಿವೇಕಾನಂದರ ಆಲೋಚನೆಗಳು ಮತ್ತು ಆದರ್ಶಗಳು ಕೋಟ್ಯಂತರ ಭಾರತೀಯರನ್ನು, ವಿಶೇಷವಾಗಿ ನಮ್ಮ ಯುವಕರನ್ನು ಪ್ರೇರೇಪಿಸುತ್ತದೆ ಮತ್ತು ಶಕ್ತಿಯನ್ನು ತುಂಬಿಸುತ್ತವೆ. ಭಾರತ ಹಲವು ಕ್ಷೇತ್ರಗಳಲ್ಲಿ ಜಾಗತಿಕ ನಾಯಕತ್ವ ಹೊಂದಲು ವಿವೇಕಾನಂದರ ವಿಚಾರಧಾರೆಗಳು ಪ್ರೇರಣೆಯಾಗಿವೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.



ಸ್ವಾಮಿ ವಿವೇಕಾನಂದರು 1862ರಲ್ಲಿ 12ನೇ ಜನವರಿ ಮಕರಸಂಕ್ರಾಂತಿಯ ಶುಭದಿನದಂದು ಕಲ್ಕತ್ತದಲ್ಲಿ ಜನಿಸಿದರು. ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರಾದ ಅವರು ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಪರಿಗಣಿತರಾಗಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಉಳಿಸಿ, ಬೆಳಸಲು ಯುವಕರಲ್ಲಿ ನವೋತ್ಸಾಹವನ್ನು ಕೆರಳಿಸಿ, ಅವರಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯನ್ನು ಮೂಡಿಸಿ ಸ್ವತಂತ್ರ ನವ ಭಾರತ ನಿರ್ಮಾಣಕ್ಕೆ ಬುನಾದಿಯನ್ನು ಹಾಕಿದ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು 'ರಾಷ್ಟ್ರೀಯ ಯುವ ದಿನ'ವಾಗಿ ಪ್ರತಿವರ್ಷ ಆಚರಿಸಲಾಗುತ್ತಿದೆ.