ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬರೋಬ್ಬರಿ 800 ಕೆ.ಜಿ ತೂಕದ, 670 ಪುಟಗಳ ಹಿಂದೂಗಳ ಪವಿತ್ರ ಗಂಥವಾದ ಭಗವದ್ಗೀತೆಯನ್ನು ದೆಹಲಿಯ ಇಸ್ಕಾನ್ ದೇವಾಲಯದ ಆವರಣದಲ್ಲಿ ಮಂಗಳವಾರ ಅನಾವರಣಗೊಳಿಸಿದರು.


COMMERCIAL BREAK
SCROLL TO CONTINUE READING

ದೆಹಲಿಯ ಪೂರ್ವ ಕೈಲಾಸ್ ಪ್ರದೇಶದಲ್ಲಿರುವ ಇಸ್ಕಾನ್ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೃಹತ್ ಗ್ರಂಥ ಅನಾವರಣಗೊಳಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಭಗವದ್ಗೀತೆಯ ದಿವ್ಯ ಜ್ಞಾನ ಪ್ರತಿಯೊಬ್ಬ ಜನತೆಗೂ ತಲುಪಲು ಇದೊಂದು ಉತ್ತಮ ಉದಾಹರಣೆಯಾಗಿದೆ. ಅಲ್ಲದೆ, ಈ ಸಂದರ್ಭ ನನಗೂ ಬಹಳ ವಿಶಿಷ್ಟವಾಗಿದೆ. ಏಕೆಂದರೆ ಎರಡು ದಶಕಗಳ ಹಿಂದೆ ಅಟಲ್ ಜೀ ಅವರು ಈ ದೇವಸ್ಥಾನದ ಶಿಲಾನ್ಯಾಸ ಮಾಡಿದ್ದರು. ಇದೀಗ ಅದೇ ದೇವಾಲಯದಲ್ಲಿ ಭಗವದ್ಗೀತೆ ಅನಾವರಣ ಮಾಡುವ ಸೌಭಾಗ್ಯ ನನಗೆ ದೊರೆತಿದೆ" ಎಂದು ಮೋದಿ ಹೇಳಿದರು.


ಮುಂದುವರೆದು ಮಾತನಾಡುತ್ತಾ, ದೇಶ ವಿದೇಶಗಳಲ್ಲಿ ಅನೇಕ ಭಾಷೆಗಳಲ್ಲಿ ಭಗವದ್ಗೀತೆಯ ಅನುವಾದ ಮಾಡಲಾಗಿದೆ. ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಅವರು ಜೈಲಿನಲ್ಲಿ ಕುಳಿತು ಭಗವದ್ಗೀತೆಯ ಸಾರವನ್ನೇ ಬರೆದಿದ್ದರು. ಅವರು ಮರಾಠಿ ಭಾಷೆಯಲ್ಲಿ ಜನತೆಗೆ ಭಗವದ್ಗೀತೆಯ ಜ್ಞಾನವನ್ನು ತಲುಪಿಸಿದ್ದರು. ಗುಜರಾತಿ ಭಾಷೆಯಲ್ಲೂ ಅನುವಾದ ಮಾಡಿದ್ದಾರೆ. ನೀವೂ ಸಹ ದೇಶದ ಅಥವಾ ರಾಜ್ಯದ ಏಳಿಗೆಯನ್ನು ಬಯಸುವಿರಾದರೆ, ಗೊಂದಲದಲ್ಲಿ ಇರುವವರಾದರೆ ಎಲ್ಲದಕ್ಕೂ ಭಗವದ್ಗೀತೆಯಲ್ಲಿ ಉತ್ತರ ದೊರೆಯಲಿದೆ ಎಂದರು.


ಇದಕ್ಕೂ ಮುನ್ನ ಇಸ್ಕಾನ್ ಮಂದಿರ ತಲುಪಲು, ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಖಾನ್ ಮಾರ್ಕೆಟ್ ಮೆಟ್ರೋ ನಿಲ್ದಾಣದಿಂದ  ರೈಲಿನಲ್ಲಿ ತೆರಳಿದರು. ಇದೇ ಸಂದರ್ಭದಲ್ಲಿ ಇತರ ಪ್ರಯಾಣಿಕರು ಪ್ರಧಾನಿಯನ್ನು ಮೆಟ್ರೋ ರೈಲಿನಲ್ಲಿ ಕಂಡು ಸಂತಸ ವ್ಯಕ್ತಪಡಿಸಿದರು. ನಿಜ ಹೇಳಬೇಕೆಂದರೆ, ದೆಹಲಿ-ಎನ್ ಸಿಆರ್ ಪ್ರದೇಶದಲ್ಲಿ ಯಾವುದೇ ಕಾರ್ಯಕ್ರಮಕ್ಕೆ ತೆರಳಬೇಕೆಂದರೆ ಪ್ರಧಾನಿ ನರೇಂದ್ರ ಮೋದಿ ಅವರು ರಸ್ತೆ ಮಾರ್ಗಕ್ಕೆ ಬದಲಾಗಿ ಮೆಟ್ರೋ ಮಾರ್ಗವನ್ನೇ ಬಳಸುತ್ತಾರೆ.


ವಿಶ್ವದಲ್ಲೇ ಅತಿ ದೊಡ್ಡ ಭಗವದ್ಗೀತೆ
ದೆಹಲಿಯ ಇಸ್ಕಾನ್ ದೇವಾಲಯ ಮುದ್ರಿಸಿರುವ 800 ಕೆ.ಜಿ. ತೂಕದ, 670 ಪುಟಗಳನ್ನು ಹೊಂದಿರುವ ಈ ಗ್ರಂಥ, 2.8 ಮೀಟರ್​ ಎತ್ತರ ಮತ್ತು 2 ಮೀಟರ್​ ಉದ್ದವಿದ್ದು, ವಿಶ್ವದ ಅತಿದೊಡ್ಡ ಮುದ್ರಿತ ಪವಿತ್ರ ಗ್ರಂಥ ಎಂಬ ಕೀರ್ತಿಗೆ ಪಾತ್ರವಾಗಿದೆ. ವಾಟರ್ ಪ್ರೂಫ್ ಕಾಗದದ ಮೇಲೆ 18 ಸೂಕ್ಷ್ಮ ವರ್ಣಚಿತ್ರಗಳ ಒಂದು ಕಲಾತ್ಮಕ ಸ್ಪರ್ಶದಿಂದ ಮತ್ತು  ಸೊಗಸಾದ ವಿನ್ಯಾಸವನ್ನು ಹೊಂದಿರುವ ಈ ಪುಸ್ತಕವನ್ನು YUPO ಸಿಂತೆಟಿಕ್​ ಲೇಪಿತ ಬಳಸಿ ಇಟಲಿಯ ಮಿಲಾನ್'ನಲ್ಲಿ ಮುದ್ರಿಸಲಾಗಿದೆ.