ವಾರಣಾಸಿಗೆ ಆಗಮಿಸಿದ ಪ್ರಧಾನಿ ಮೋದಿ; ಭವ್ಯ ಸ್ವಾಗತಕ್ಕೆ ಕಾಶಿ ಸಜ್ಜು
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪ್ರಧಾನಿಗೆ ಸಾಥ್ ನೀಡಿದ್ದು, ಪ್ರಧಾನಿ ಮೋದಿ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಗೆಲುವಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಇಂದು ಭೇಟಿ ನೀಡಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾರಣಕರ್ತರಾದ ಕಾಶಿವಾಸಿಗಳಿಗೆ ಮೋದಿ ಧನ್ಯವಾದ ಹೇಳಲಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪ್ರಧಾನಿಗೆ ಸಾಥ್ ನೀಡಿದ್ದು, ಪ್ರಧಾನಿ ಮೋದಿ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇದೇ ವೇಳೆ ಕಾಶಿಯ ಜನತೆ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ ಕೋರಲಿದ್ದಾರೆ.
ಬಳಿಕ ಕಾಶಿಯ ಕಾಲಭೈರವ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಮೋದಿ-ಶಾ ಜೋಡಿ, ಅಲ್ಲಿಂದ ವಾರಣಾಸಿಯ ಲಾಲ್ಪುರದಲ್ಲಿರುವ ದೀನ ದಯಾಳ್ ಹ್ಯಾಂಡಿಕ್ರಾಫ್ಟ್ ಕಾಂಪ್ಲೆಕ್ಸ್ ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ನೇರ ಸಂವಾದದಲ್ಲಿ ಪಾಲ್ಗೊಳ್ಳಲಿರುವ ಮೋದಿ, ಮಧ್ಯಾಹ್ನ 12.30ಕ್ಕೆ ವಾರಣಾಸಿಯಿಂದ ದೆಹಲಿಗೆ ಮರಳಲಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ನರೇಂದ್ರ ಮೋದಿ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿ ಶಾಲಿನಿ ಯಾದವ್ 4,79,505 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 2014ರ ಚುನಾವಣೆಯಲ್ಲಿಯೂ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮೋದಿ, ಅಂ ಆದ್ಮಿ ಪಕ್ಷದ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ಅವರನ್ನು 3,71,784 ಮತಗಳ ಅಂತರದಿಂದ ಸೋಲಿಸಿದ್ದರು.