ನವದೆಹಲಿ: ಯುವಕನೊಬ್ಬ ಹುಡುಗಿಗೆ ಹಿಗ್ಗಾಮುಗ್ಗಾ ಥಳಿಸುತ್ತಿರುವ ವೀಡಿಯೋ ವೈರಲ್ ಆದ ಬೆನ್ನಲ್ಲೇ, ಸಂತ್ರಸ್ತ ಯುವತಿಯೊಬ್ಬಳು ತನ್ನ ಮೇಲೆ ಹಲ್ಲೆ ಮಾಡಿದ ಯುವಕ ಸೆಪ್ಟೆಂಬರ್ 2 ರಂದು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಗಿ ದೂರು ನೀಡಿದ್ದಾಳೆ. 


COMMERCIAL BREAK
SCROLL TO CONTINUE READING

ಹಲ್ಲೆ ನಡೆಸಿದ ಯುವಕ ಸೆಪ್ಟೆಂಬರ್ 2 ರಂದು ಉತ್ತಮ್ ನಗರದಲ್ಲಿರುವ ತನ್ನ ಸ್ನೇಹಿತನ ಕಚೇರಿಗೆ ಯುವತಿಯನ್ನು ಕರೆಸಿಕೊಂಡು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ನಂತರ ಆಕೆಯನ್ನು ಎಳೆದೊಯ್ದು ಹಿಗ್ಗಾಮುಗ್ಗಾ ಥಳಿಸಿದ್ದಾನೆ ಎಂದು ಆಕೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಳು. ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಒಂದು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. 


ಯುವತಿಯ ದೂರಿನ ಆಧಾರದ ಮೇಲೆ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಆರೋಪಿ ರೋಹಿತ್ ತೋಮರ್ ವಿರುದ್ಧ ಐಪಿಎಸ್ ಸೆಕ್ಷನ್ 376 ಮತ್ತು 323ರ ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ, ಆರೋಪಿ ರೋಹಿತ್ ದೆಹಲಿ ನಗರ ಅಪೋಲಿಸ್ ಅಧಿಕಾರಿಯ ಮಗ ಎಂದು ಗುರುತಿಸಲಾಗಿದೆ. 


ಘಟನೆ ವಿವರ: ಸೆಪ್ಟೆಂಬರ್ 2ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಉತ್ತಮ್ ನಗರ ಪ್ರದೇಶದಲ್ಲಿದಲ್ಲಿರುವ ಬಿಪಿಒ ಕಚೇರಿಯಲ್ಲಿ ರೋಹಿತ್ ಸಿಂಗ್​ ತೋಮರ್​ ಎಂಬಾತ ಯುವತಿಯೊಬ್ಬಳ ತಲೆಗೂದಲನ್ನು ಹಿಡಿದು ನೆಲದ ಮೇಲೆ ಬೀಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದ. ಜತೆಗೆ ಮೊಣಕಾಲಿನಿಂದ ಒದ್ದು, ಮೊಣಕೈನಿಂದ ಗುದ್ದಿ ಯುವತಿಗೆ ಥಳಿಸಿದ್ದ. ಈ ದೃಶ್ಯವನ್ನು ಆತನ ಸ್ನೇಹಿತರು ಚಿತ್ರೀಕರಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.  


ರೋಹಿತ್​ ಮಾಜಿ ಪ್ರೇಯಸಿ ಈ ಘಟನೆಯ ಕುರಿತು ಗುರುವಾರ ದೂರು ದಾಖಲಿಸಿದ್ದರು. ಈ ಸಂದರ್ಭದಲ್ಲಿ ಆಕೆ ತನಗೆ ರೋಹಿತ್​ ಈ ವೀಡಿಯೋವನ್ನು ಕಳುಹಿಸಿ ನನ್ನನ್ನು ಮದುವೆಯಾಗದಿದ್ದರೆ ವೀಡಿಯೋದಲ್ಲಿರುವ ಯುವತಿಗೆ ಆದ ಗತಿಯೇ ನಿನಗಾಗುತ್ತದೆ ಎಂದು ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ. ಇದರಿಂದ ಹೆದರಿದ ಯುವತಿ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಆ ಯುವತಿ, ತನಗೆ ಆತನೊಂದಿಗೆ ಮದುವೆ ಆಗಲು ಇಷ್ಟವಿಲ್ಲ ಎಂದಿದ್ದಾಳೆ. 


ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ "ದೆಹಲಿಯ ಕಚೇರಿಯೊಂದರಲ್ಲಿ ಯುವಕನೊಬ್ಬ ಯುವತಿಯೊಬ್ಬಳಿಗೆ ಥಳಿಸುತ್ತಿರುವ ವೀಡಿಯೋ ನನ್ನ ಗಮನಕ್ಕೂ ಬಂದಿದೆ. ಈ ಬಗ್ಗೆ ದೆಹಲಿ ಪೊಲೀಸ್ ಆಯುಕ್ತರೊಂದಿಗೆ ಮಾತುಕತೆ ನಡೆಸಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.