ನವದೆಹಲಿ: ಕತ್ತೆಗಳ ಗುಂಪೊಂದು ಬೆಲೆಬಾಳುವ ಗಿಡಗಳನ್ನು ತಿಂದು ಹಾಕಿದವೆಂದು ಆರೋಪಿಸಿ ಅವುಗಳನ್ನು ಜೈಲಿಗಟ್ಟಿದ ಪ್ರಸಂಗ ಉತ್ತರಪ್ರದೇಶದಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ಉತ್ತರಪ್ರದೇಶದ ಜಲಾನ್ ಜಿಲ್ಲೆಯ ಉರಲ್ ಜೈಲಿನ ಹೊರಭಾಗದಲ್ಲಿ ಬೆಳೆದಿದ್ದ ಬೆಳೆಬಾಳುವ ಗಿಡಗಳನ್ನು ತಿಂದು ಅಪರಾಧ ಎಸಗಿವೆ ಎಂದು ಆರೋಪಿಸಿ ಅವುಗಳನ್ನು ಜೈಲಿನಲ್ಲಿ 4 ದಿನಗಳ ಕಾಲ ಬಂಧನದಲ್ಲಿಟ್ಟು, ಸೋಮವಾರ ಬಿಡುಗಡೆಗೊಳಿಸಲಾಗಿದೆ. ಆದರೆ ಇದರಿಂದ ಕತ್ತೆಗಳಿಗೆ ತಮ್ಮ ತಪ್ಪಿನ ಅರಿವಾಗಿದೆಯೇ, ಇಲ್ಲವೇ ಎಂಬುದು ತಿಳಿದು ಬಂದಿಲ್ಲ!


ಬಹಳ ವಿಚಿತ್ರ ಎನಿಸುತ್ತಿದೆಯಲ್ಲವೇ? ಆದರೂ ಇದು ಸತ್ಯ. ಜೈಲಿನ ಸುತ್ತಲಿನ ಪ್ರದೇಶದಲ್ಲಿ ಲಕ್ಷಾಂತರ ರೂ. ಬೆಲೆಬಾಳುವ ಗಿಡಗಳನ್ನು ಬೆಳೆಸಲಾಗಿದ್ದು, ಕತ್ತೆಗಳನ್ನು ಆ ಪ್ರದೇಶದಲ್ಲಿ ಬಿಡದಂತೆ ಅವುಗಳ ಮಾಲೀಕರಿಗೆ ಎಚ್ಚರಿಕೆ ನೀಡಿದ್ದರೂ, ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಜೈಲಿನ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.


''ಇಲ್ಲಿರುವ ಗಿಡಗಳು ಬೆಳೆಬಾಳುವುವು. ಅವುಗಳನ್ನು ಕತ್ತೆಗಳು ತಿಂದು ಹಾಳು ಮಾಡುತ್ತಿದ್ದರಿಂದ ಅವುಗಳನ್ನು ಈ ಪ್ರದೇಶದಲ್ಲಿ ಬಿಡಬಾರದೆಂದು ಹಲವು ಬಾರಿ ಅದರ ಮಾಲೀಕರಿಗೆ ಎಚ್ಚರಿಕೆ ನೀಡಿದ್ದರೂ, ಅವರು ಅದನ್ನು ಪಾಲಿಸಲಿಲ್ಲ. ಹಾಗಾಗಿ ಕತ್ತೆಗಳನ್ನು ಬಂಧಿಸಿದೆವು'' ಎಂದು ಹಿರಿಯ ಪೋಲಿಸ್ ಪೇದೆ ಆರ್.ಕೆ.ಮಿಶ್ರಾ ತಿಳಿಸಿದ್ದಾರೆ. 


ಈ ಹಿಂದೆ ರಾಜ್ಯದಲ್ಲಿ ಸಚಿವರೊಬ್ಬರಿಗೆ ಸಂಬಂಧಿಸಿದ ಎಮ್ಮೆಗಳು ಕಾಣೆಯಾದ ಸಂದರ್ಭದಲ್ಲಿ ಇಡೀ  ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಿತ್ತು. ಆದರೆ ಈ ಕತ್ತೆಗಳು ನಾಲ್ಕು ದಿನಗಳವರೆಗೆ ಜೈಲಿನಲ್ಲಿ ಬಂಧಿಯಾಗಿದ್ದರೂ ಸಹಾ ಯಾವೊಬ್ಬ ರಾಜಕಾರಣಿಯ ಬೆಂಬಲವನ್ನು ಪಡೆಯುವಲ್ಲಿ ವಿಫಲವಾದವು!


ಕುತೂಹಲಕಾರಿಯಾಗಿ ವಿಷಯವೆಂದರೆ, ಉನ್ನತ ಅಪರಾಧ ಪ್ರಮಾಣಕ್ಕೆ ಕುಖ್ಯಾವಾದ ಉತ್ತರ ಪ್ರದೇಶ ಇತ್ತೀಚಿನ ವಾರಗಳಲ್ಲಿ ಕ್ರಿಮಿನಲ್ ಚಟುವಟಿಕೆಗಳ ಮೇಲೆ ಕ್ರಮ ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಪ್ರಾಣಿಗಳನ್ನು ಜೈಲಿನಲ್ಲಿ ಬಂಧಿಸಿಟ್ಟು ಇಲ್ಲಿನ ಪೋಲಿಸರು ಮತ್ತೊಂದು ದಾಖಲೆಯನ್ನು ಸೃಷ್ಟಿಸಿದ್ದಾರೆ. ಈ ಕಾರ್ಯಕ್ಕೆ ನಗಬೇಕೋ, ಅಳಬೇಕೋ ಅಥವಾ ಪ್ರಶಂಶಿಸಬೇಕೋ ನೀವೇ ನಿರ್ಧರಿಸಿ.