ಸಂಸದ ಕಮಲ್‌ನಾಥ್ ಕಡೆ ಗನ್ ತೋರಿಸಿದ ಪೇದೆ ಬಂಧನ
ಸಂಸದ ಕಮಲ್‌ನಾಥ್ ಕಡೆ ಲೋಡೆಡ್ ಬಂದೂಕನ್ನು ಗುರಿಯಿಟ್ಟಿದ್ದ ಪೊಲೀಸ್ ಪೇದೆಯನ್ನು ಇಂದು ಪೊಲೀಸರು ಬಂಧಿಸಿದ್ದಾರೆ.
ಛಿಂದ್ವಾರ: ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಕಾಂಗ್ರೆಸ್ ನಾಯಕ, ಸಂಸದ ಕಮಲ್‌ನಾಥ್ ಕಡೆ ಲೋಡೆಡ್ ಬಂದೂಕನ್ನು ಗುರಿಯಿಟ್ಟಿದ್ದ ಪೊಲೀಸ್ ಪೇದೆಯನ್ನು ಇಂದು ಪೊಲೀಸರು ಬಂಧಿಸಿದ್ದು, ದೂರು ದಾಖಲಿಸಲಾಗಿದೆ.
ವಿಚಾರಣೆ ವೇಳೆ ತನ್ನ ಕೃತ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಪೇದೆ, "ನಾನು ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿಲ್ಲ, ಬಂದುಕನ್ನು ಒಂದು ಭುಜದಿಂದ ಇನ್ನೊಂದು ಭುಜಕ್ಕೆ ಸ್ಥಳಾಂತರಿಸುತ್ತಿದ್ದೆ. ಆದರೆ ಇದನ್ನು ತಪ್ಪಾಗಿ ಅರ್ಥೈಸಲಾಗಿದೆ'' ಎಂದು ಹೇಳಿದ್ದಾನೆ.
ಬಂದೂಕನ್ನು ಒಂದು ಭುಜದಿಂದ ಮತ್ತೂಂದು ಭುಜಕ್ಕೆ ಬದಲಿಸುವಾಗ ಈ ರೀತಿ ಆಗಿದೆ' ಎಂದು ಪೇದೆ ಹೇಳಿದ್ದಾರೆ. ಸದ್ಯಕ್ಕೆ ಈ ಪೇದೆಯನ್ನು ಅಮಾನತು ಮಾಡಲಾಗಿದ್ದು, ವಿಚಾರಣೆ ಮುಂದುವರಿದಿದೆ. ಈ ಪ್ರಕರಣವನ್ನು ತನಿಖೆ ಮಾಡಲು ವಿಶೇಷ ತನಿಖಾ ತಂಡ (ಎಸ್ ಐ ಟಿ) ರಚಿಸಲಾಗಿದ್ದು, ಪೇದೆಯ ಆರೋಗ್ಯ ಪರೀಕ್ಷೆ ಮತ್ತು ಹಿಂದಿನ ದಾಖಲೆಯನ್ನು ಪರಿಶೀಲಿಸಲಾಗುತ್ತಿದೆ.
ಛೀದ್ವಾರದ ಡೆಪ್ಯುಟಿ ಡಿಐಜಿ ಜಿ.ಕೆ.ಪಾಂಡೆ ಮಾತನಾಡಿ, ಕಮಲ್ನಾಥ್ ಅವರು ಸಂಜೆ 4 ಗಂಟೆ ಸಮಯದಲ್ಲಿ ವಿಮಾನ ಹತ್ತಲು ಬರುತ್ತಿದ್ದ ಸಂದರ್ಭದಲ್ಲಿ ಪೇದೆ ಪವಾರ್ ತಕ್ಷಣವೇ ತನ್ನ ಐಎನ್ಎಸ್ಎಎಸ್ ರೈಫಲ್ ಅನ್ನು ತೋರಿಸಿದರು. ಆದರೆ ಅಲ್ಲಿನ ಇತರ ಭದ್ರತಾ ಸಿಬ್ಬಂದಿಗಳು ಅವರನ್ನು ತಕ್ಷಣವೇ ತಡೆದರು ಎಂದರು.