ಉಪಚುನಾವಣೆ ಬಳಿಕ ರಾಜಕೀಯದಲ್ಲಿ ಹೊಸ ನಾಟಕಗಳು ಶುರು: ಹೆಚ್ಡಿಕೆ
ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಿ ಬಿಡುಗಡೆ ಮಾಡಲಿದ್ದು, ಉಪಸಮರದಲ್ಲಿ ಗೆಲುವು ಸಾಧಿಸಲು ಜೆಡಿಎಸ್ ಸಾಕಷ್ಟು ತಯಾರಿ ನಡೆಸಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಮೈಸೂರು: ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆ ಬಳಿಕ ರಾಜಕೀಯದಲ್ಲಿ ಸಾಕಷ್ಟು ನಾಟಕಗಳು ನಡೆಯಲಿವೆ ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿಂದು ಮಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಇದುವರೆಗೂ ರಾಜ್ಯ ರಾಜಕೀಯದಲ್ಲಿ ನಡೆದಿರುವ ಬೆಳವಣಿಗೆಗಳನ್ನು ಗಮನಿಸಿದರೆ ಚುನಾವಣೆ ಬಳಿಕ ಸಾಕಷ್ಟು ಬದಲಾವಣೆ ಆಗಲಿದೆ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಿ ಬಿಡುಗಡೆ ಮಾಡಲಿದ್ದು, ಉಪಸಮರದಲ್ಲಿ ಗೆಲುವು ಸಾಧಿಸಲು ಜೆಡಿಎಸ್ ಸಾಕಷ್ಟು ತಯಾರಿ ನಡೆಸಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಸ್ಪರ್ಧಿಸಿ ಏಕೈಕ ಸ್ಥಾನಗಳನ್ನು ಗಳಿಸಿದ್ದವು. ಇದರಿಂದಾಗಿ ಈಗ ನಡೆಯಲಿರುವ ವಿಧಾನಸಭಾ ಉಪಚುನಾವಣೆಯಲ್ಲಿ ಎರಡೂ ಪಕ್ಷಗಳೂ ಏಕಾಂಗಿಯಾಗಿ ಹೋರಾಟ ನಡೆಸಲು ನಿರ್ಧರಿಸಿವೆ. ಎರಡೂ ಪಕ್ಷಗಳೂ ಚುನಾವಣೆಯಲ್ಲಿ ಗೆಲುವು ಸಾಧಿಸಲು ತಮ್ಮದೇ ಆದ ತಂತ್ರಗಾರಿಕೆ ನಡೆಸಿವೆ.
ಅಕ್ಟೋಬರ್ 21ರಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಅ.24ರಂದು ಫಲಿತಾಂಶ ಹೊರಬೀಳಲಿದೆ.