ಅನಂತ್ ಕುಮಾರ್ ನಿಧನಕ್ಕೆ ಗಣ್ಯರು ಕಂಬನಿ
ಅನಂತ್ ಕುಮಾರ್ ಕರ್ನಾಟಕ ಮತ್ತು ದೆಹಲಿ ನಡುವಿನ ಕೊಂಡಿಯಾಗಿದ್ದರು- ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ
ಬೆಂಗಳೂರು: ಕೇಂದ್ರ ಸಚಿವ ಅನಂತ್ ಕುಮಾರ್ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಅನಂತ್ ಕುಮಾರ್ ಅವರು ಇನ್ನಿಲ್ಲ ಎನ್ನುವ ವಿಚಾರ ತಿಳಿದು ತೀವ್ರ ನೋವುಂಟಾಗಿದೆ. ಅವರನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟ. ಸಾವಿನ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ - ರಾಷ್ಟ್ರಪತಿ ರಾಮನಾಥ ಕೋವಿಂದ
'ಅವರ ಕೆಲಸದಿಂದಾಗಿ ಅನಂತಕುಮಾರ್ ಎಂದೆಂದಿಗೂ ನೆನಪಿನಲ್ಲಿರುತ್ತಾರೆ'- ಅನಂತಕುಮಾರ್ ಸಾವಿಗೆ ಕಂಬನಿ ಮಿಡಿದ ಪ್ರಧಾನಿ ನರೇಂದ್ರ ಮೋದಿ
ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಅಕಾಲಿಕ ಮರಣದ ಸುದ್ದಿಯಿಂದ ನಾನು ತುಂಬಾ ಆಘಾತಗೊಂಡಿದ್ದೇನೆ ಮತ್ತು ದುಃಖಿತನಾಗಿದ್ದೇನೆ. ಅನಂತ್ ಕುಮಾರ್ ಓರ್ವ ಕ್ರಿಯಾತ್ಮಕ ನಾಯಕರಾಗಿದ್ದರು- ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ
ನಾವೆಲ್ಲ ಒಬ್ಬ ಸೃಜನಶೀಲ ವ್ಯಕ್ತಿಯನ್ನು ಕಳೆದುಕೊಂಡಿದ್ದೀವಿ. ನನ್ನ ಮತ್ತು ಅವರ ಸಂಬಂಧ ಸುಮಾರು 3 ದಶಕಗಳದ್ದು. ನಾನು ಈ ದಿನ ನನ್ನ ಒಬ್ಬ ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡಿದ್ದೀನಿ. ವಯಕ್ತಿಕವಾಗಿ ಮನಸ್ಸಿಗೆ ಬಹಳ ನೋವುಂಟಾಗಿದೆ- ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ
ಕೇಂದ್ರ ಸಚಿವ ಅನಂತ್ ಕುಮಾರ್ ವಿಧಿವಶರಾದ ವಿಚಾರ ತಿಳಿದು ಬೇಸರವಾಯಿತು. ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ- ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ರಾಜಕಾರಣ ಮೀರಿದ ಸ್ನೇಹ ನಮ್ಮ ಕುಟುಂಬಗಳ ನಡುವೆ ಇತ್ತು. ಸ್ನೇಹಕ್ಕೆ ಅತ್ಯಂತ ಮಹತ್ವ ನೀಡುತ್ತಿದ್ದ ವ್ಯಕ್ತಿ ಅವರಾಗಿದ್ದರು. ಇಂದು ಓರ್ವ ಆತ್ಮೀಯ ಗೆಳೆಯನನ್ನು ಕಳೆದುಕೊಂಡಂತಾಗಿದೆ- ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ
'ಅನಂತ್ ಕುಮಾರ್ ಓರ್ವ ಸಜ್ಜನ ಸುಸಂಸ್ಕೃತ ರಾಜಕಾರಣಿ. ಬಹಳ ಚಿಕ್ಕ ವಯಸ್ಸಿಗೆ ದೊಡ್ಡಮಟ್ಟಕ್ಕೆ ಬೆಳೆದಿದ್ದರು. ರಾಷ್ಟ್ರ-ರಾಜ್ಯಕ್ಕೆ ತಮ್ಮದೇ ಕೊಡುಗೆ ನೀಡಿರುವ ಅವರು, ರಾಜ್ಯ ಹಾಗೂ ಕೇಂದ್ರದ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದರು. ಅನಂತಕುಮಾರ್ ಸಾವು ತುಂಬಲಾರದ ನಷ್ಟ'. 'ಕರ್ನಾಟಕ ಹಾಗೂ ದೆಹಲಿ ನಡುವಣ ಕೊಂಡಿ ಕಳಚಿ ಬಿದ್ದಿದೆ. ರಾಜಕೀಯದಲ್ಲಿ ಇನ್ನಷ್ಟು ಬೆಳೆಯಲು ಅವರಿಗೆ ಅವಕಾಶವಿತ್ತು' - ಮಾಜಿ ಸಿಎಂ ಸಿದ್ದರಾಮಯ್ಯ
ಪ್ರೀತಿಯ ಸ್ನೇಹಿತ, ಸಹೋದರ ಇನ್ನಿಲ್ಲವೆಂಬ ಸತ್ಯ ಎಷ್ಟೊಂದು ಕಠೋರ- ಕೇಂದ್ರ ಸಚಿವ ಸದಾನಂದ ಗೌಡ
'ಅನಂತಕುಮಾರ್ ಅವರ ನಿಧನದಿಂದ ರಾಜಕೀಯ ಕ್ಷೇತ್ರ ಓರ್ವ ಮೌಲ್ಯಾಧಾರಿತ ರಾಜಕಾರಣಿ ಹಾಗೂ ಅತ್ಯುತ್ತಮ ವಾಗ್ಮಿಯೊಬ್ಬರನ್ನು ಕಳೆದುಕೊಂಡತಾಗಿದೆ. ಅವರು ಸಂಸದರಾಗಿ, ಕೇಂದ್ರ ಸಚಿವರಾಗಿ ದೇಶಕ್ಕೆ ನೀಡಿದ ಕೊಡುಗೆ ಅನನ್ಯ'- ಸಂಸತ್ತಿನ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ
ಅನಂತ್ ಅಕಾಲಿಕ ನಿಧನದಿಂದ ಆಘಾತವಾಗಿದೆ. ಅವರು ಉತ್ಸಾಹದ ಚಿಲುಮೆಯಾಗಿ ಬದ್ಧತೆಯಿಂದ ದೇಶ ಹಾಗೂ ಸಂಘಟನೆಗೆ ಶ್ರಮಿಸಿದ್ದರು. ಕರ್ನಾಟಕದಲ್ಲಿ ಪಕ್ಷವನ್ನು ಬಲಪಡಿಸಲು ಅವಿರತವಾಗಿ ಶ್ರಮಿಸಿದ್ದರು- ಬಿಜೆಪಿ ಅಧ್ಯಕ್ಷ ಅಮಿತ್ ಶಾ
ಅನಂತ್ ಕುಮಾರ್ ಕಳೆದುಕೊಂಡು ಪಕ್ಷ, ನಾಡು, ದೇಶ ಬಡವಾಗಿದೆ- ಬಿ.ಎಸ್. ಯಡಿಯೂರಪ್ಪ
'ಅನಂತ್ ಕುಮಾರ್ ರಾಜ್ಯದಲ್ಲಿ ಪಕ್ಷ ಸಂಘಟನೆ ಕಟ್ಟಲು ಪ್ರಮುಖ ಕಂಬವಾಗಿ ಕೆಲಸ ಮಾಡಿದ್ದರು. ಒಬ್ಬ ಸ್ನೇಹಿತನನ್ನು ಮಾತ್ರವಲ್ಲ, ಸಹೋದರನನ್ನು ನಾನು ಕಳೆದುಕೊಂಡಿದ್ದೇನೆ- ಕೆ.ಎಸ್. ಈಶ್ವರಪ್ಪ
ಅನಂತ ಕುಮಾರ್ ನನಗೆ ಅತ್ಯಂತ ಆತ್ಮೀಯರು. ಆರು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ಸಾಕಷ್ಟು ಜನ ಪರ ಕೆಲಸ ಮಾಡಿದ್ದಾರೆ. ಪಕ್ಷಾತೀತವಾಗಿ ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರೊಬ್ಬ ಸಜ್ಜನ ರಾಜಕಾರಣಿಯಾಗಿದ್ದರು. ರಾಜಕೀಯ ಸಿದ್ಧಾಂತ ಬೇರೆಯೇ ಇದ್ದರೂ ಸಾರ್ವಜನಿಕ ಬದುಕಿನಲ್ಲಿ ಮಾದರಿಯಾಗಿದ್ದಾರೆ- ಡಾ.ಜಿ. ಪರಮೇಶ್ವರ್
ಅನಂತ್ ಕುಮಾರ್ ಇನ್ನು ನಮ್ಮೊಂದಿಗಿಲ್ಲ ಎನ್ನುವ ಸುದ್ದಿ ಆಘಾತವಾಗಿದೆ. ಬೆಂಗಳೂರು ಅವರ ಮನಸ್ಸು ಮತ್ತು ಹೃದಯವಾಗಿತ್ತು. ಅವರ ಸಾವಿನ ಆಘಾತವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ- ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
ಅನಂತ್ ಕುಮಾರ್ ಇಂದು ನಮ್ಮೊಂದಿಗಿಲ್ಲ ಎನ್ನುವ ವಿಚಾರ ಬಹಳ ದುಃಖ ತಂದಿದೆ. ಸಮಾಜಕ್ಕೆ ಅವರ ಕೊಡುಗೆ, ಜನರಿಗೆ ನೀಡಿದ ಸೇವೆ ಸದಾ ನೆನಪಿನಲ್ಲಿರುವಂಥದ್ದು - ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್
ಅನಂತ್ ಕುಮಾರ್ ಇಲ್ಲ ಎಂದರೆ ಯಾರೂ ನಂಬುವುದಿಲ್ಲ. ಸದಾ ನಗುನಗುತ್ತಾ ಕೆಲಸ ಮಾಡುತ್ತಿದ್ದರು. ಸರ್ಕಾರ ಮತ್ತು ಪಕ್ಷ ಎರಡರಲ್ಲೂ ಸದಾ ಸಕ್ರಿಯರಾಗಿದ್ದರು. ಆರು ಭಾರಿ ಬೆಂಗಳೂರು ನಗರದಿಂದ ಸಂಸತ್ತಿಗೆ ಆಯ್ಕೆಯಾಗುವುದು ಸುಲಭದ ಮಾತಲ್ಲ- ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್