ಭುವನೇಶ್ವರ: ಒಡಿಶಾದ ಕೇಂದ್ರಪಾರ ಸಂಸದೀಯ ಕ್ಷೇತ್ರ ವ್ಯಾಪ್ತಿಯ ಪಟ್ಕುರಾ ವಿಧಾನಸಭಾ ಕ್ಷೇತ್ರಕ್ಕೆ ಜುಲೈ 20 ರಂದು ಚುನಾವಣೆಗೆ ನಡೆಯಲಿದೆ ಎಂದು ಚುನಾವಣಾ ಆಯೋಗದ ಅಧಿಸೂಚನೆ ತಿಳಿಸಿದೆ.


COMMERCIAL BREAK
SCROLL TO CONTINUE READING

ಏಪ್ರಿಲ್ 29ರಂದೇ ಈ ಸ್ಥಾನಕ್ಕೆ ಚುನಾವಣೆ ನಡೆಯಬೇಕಿತ್ತು. ಆದರೆ ಬಿಜೆಡಿ ಅಭ್ಯರ್ಥಿ ಪ್ರಕಾಶ್ ಅಗರ್ವಾಲ್ ಅವರು ಏಪ್ರಿಲ್ 20ರಂದು ನಿಧನರಾದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿತ್ತು. 


"ಹಬ್ಬಗಳು, ಮತದಾರರ ಪಟ್ಟಿ ಮುಂತಾದ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಂಡ ಬಳಿಕ ಜುಲೈ 20ರಂದು ಮತದಾನ ನಡೆಸಲು ನಿರ್ಧರಿಸಲಾಗಿದ್ದು, ಜುಲೈ 23ರಂದು ಫಲಿತಾಂಶ ಹೊರಬೀಳಲಿದೆ" ಎಂದು ಚುನಾವಣಾ ಆಯೋಗ ತಿಳಿಸಿದೆ. 


"ಎಲ್ಲಾ ಮತದಾನ ಕೇಂದ್ರಗಳಲ್ಲಿ ಇವಿಎಂ ಮತ್ತು ವಿವಿಪಿಎಟಿಗಳನ್ನು ಬಳಸಲು ಆಯೋಗ ನಿರ್ಧರಿಸಿದೆ. ಸಾಕಷ್ಟು ಸಂಖ್ಯೆಯ ಇವಿಎಂ ಮತ್ತು ವಿವಿಪಿಎಟಿಗಳನ್ನು ಲಭ್ಯಗೊಳಿಸಲಾಗಿದ್ದು, ಈ ಯಂತ್ರಗಳ ಸಹಾಯದಿಂದ ಮತದಾನ ಸುಗಮವಾಗಿ ನಡೆಯುವಂತೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ" ಎಂದು ಆಯೋಗದ ಅಧಿಸೂಚನೆ ತಿಳಿಸಿದೆ. 


ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಇದು ಎಲ್ಲಾ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಅನ್ವಯಿಸುತ್ತದೆ ಎಂದು ಆಯೋಗ ತಿಳಿಸಿದೆ.