ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಾಲ್ಕು ದಿನಗಳ ರಜೆಯ ನಂತರ ಬುಧವಾರ ಶಾಲೆಗಳು ತೆರೆದವು. ಈ ಮಧ್ಯೆ, ಬೆಳಿಗ್ಗೆ ವಾಯುಮಾಲಿನ್ಯದಿಂದ ರಕ್ಷಣೆ ಪಡೆಯುವ ಸಲುವಾಗಿ ವಿದ್ಯಾರ್ಥಿಗಳು ಮಾಸ್ಕ್ ಹಾಕಿಕೊಂಡು ಶಾಲೆಗೆ ಹೊರಟರು. 


COMMERCIAL BREAK
SCROLL TO CONTINUE READING

ದೀಪಾವಳಿಯ ನಂತರ, ರಾಷ್ಟ್ರೀಯ ರಾಜಧಾನಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ (ಎನ್‌ಸಿಆರ್) ಗಾಳಿಯ ಗುಣಮಟ್ಟ ತೀವ್ರವಾಗಿ ಹದಗೆಟ್ಟಿತ್ತು. ನವೆಂಬರ್ 1 ರಂದು ದೆಹಲಿ-ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯ (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಪ್ರಾಧಿಕಾರ (ಇಪಿಸಿಎ) ವಾಯು ತುರ್ತು ಪರಿಸ್ಥಿತಿ ಘೋಷಿಸಿತು. ಇದರ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ ಎಲ್ಲಾ ಶಾಲೆಗಳನ್ನು ನವೆಂಬರ್ 5 ರೊಳಗೆ ಮುಚ್ಚುವಂತೆ ಆದೇಶಿಸಿತ್ತು.



ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ ಈ ನಿರ್ಧಾರವನ್ನು ಪ್ರಕಟಿಸಿದ್ದು, "ಹೊಗೆಯಿಂದಾಗಿ ದೆಹಲಿಯಲ್ಲಿ ಮಾಲಿನ್ಯವು ಹೆಚ್ಚಾಗಿದೆ. ಆದ್ದರಿಂದ ನವೆಂಬರ್ 5 ರವರೆಗೆ ಎಲ್ಲಾ ಶಾಲೆಗಳನ್ನು ಮುಚ್ಚಲು ಸರ್ಕಾರ ನಿರ್ಧರಿಸಿದೆ" ಎಂದು ಟ್ವೀಟ್ ಮಾಡಿದ್ದರು. ಸದ್ಯ ದೆಹಲಿಯಲ್ಲಿ ಮಾಲಿನ್ಯದ ಮಟ್ಟವು ಕಡಿಮೆಯಾಗಿದೆ, ಆದರೆ ನೋಯ್ಡಾದಲ್ಲಿ ಮಾಲಿನ್ಯ ಇನ್ನೂ ಕಡಿಮೆಯಾಗಿಲ್ಲ.


ದೆಹಲಿ-ಎನ್‌ಸಿಆರ್ ನಲ್ಲಿ ಮಂಗಳವಾರಕ್ಕಿಂತ ಇಂದು ಬೆಳಿಗ್ಗೆ ಕಡಿಮೆ ಮಾಲಿನ್ಯ ದಾಖಲಾಗಿದೆ. ಬೆಳಿಗ್ಗೆ 6 ಗಂಟೆಗೆ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತುಂಬಾ ಕಳಪೆಯಾಗಿತ್ತು. ಅದೇ ಸಮಯದಲ್ಲಿ, ನೋಯ್ಡಾದಲ್ಲಿನ ಗಾಳಿ ಇನ್ನೂ ಅಪಾಯಕಾರಿ ಮಟ್ಟದಲ್ಲಿದೆ.


ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ದೆಹಲಿಯಲ್ಲಿ 356, ಗುರುಗ್ರಾಮ್ನಲ್ಲಿ 389 ಮತ್ತು ನೋಯ್ಡಾದಲ್ಲಿ  412 ಆಗಿ ಉಳಿದಿದೆ. 400 ಮಟ್ಟದ ಎಕ್ಯೂಐ ಅನ್ನು ಗಂಭೀರವೆಂದು ಪರಿಗಣಿಸಲಾಗಿದೆ.