ನವದೆಹಲಿ: ಲಖನೌ ಲೋಕಸಭಾ  ಕ್ಷೇತ್ರದಿಂದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ವಿರುದ್ಧ ಶತ್ರುಘ್ನ ಸಿನ್ಹಾ ಅವರ ಪತ್ನಿ ಪೂನಂ ಸಿನ್ಹಾ ಅವರು ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಸುದ್ದಿ ಮೂಲಗಳ ಪ್ರಕಾರ ಈಗ ಪೂನಂ ಸಿನ್ಹಾ ಅವರು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಸಮಾಜವಾದಿ ಪಕ್ಷ (ಎಸ್ಪಿ) ಮೈತ್ರಿಕೂಟದ ಅಭ್ಯರ್ಥಿಯಾಗಿ ಉತ್ತರ ಪ್ರದೇಶದ ರಾಜಧಾನಿ ಲಖನೌದಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾಂಗ್ರೆಸ್ ಕೂಡ ಬೆಂಬಲ ನೀಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ 


ಲಖನೌದಿಂದ ಸ್ಪರ್ಧಿಸಲು ಉತ್ಸುಕರಾಗಿದ್ದ ಜಿತಿನ್ ಪ್ರಸಾದ ಅವರು ತಮ್ಮ ಕ್ಷೇತ್ರ ಧೌರಹಾರನ್ನು ಆಯ್ಕೆ ಮಾಡಲು ಮನವೊಲಿಸಬೇಕಾಯಿತು.ಈಗ ಲಕ್ನೋ ಕ್ಷೇತ್ರವನ್ನು ಎಸ್ಪಿ-ಬಿಎಸ್ಪಿ ಮೈತ್ರಿಗೆ ಕಾಂಗ್ರೆಸ್ ಬಿಟ್ಟುಕೊಡಲಿದೆ ಎಂದು ತಿಳಿದುಬಂದಿದೆ. ಲಖನೌದಲ್ಲಿ ನಾಲ್ಕು ಲಕ್ಷ ಕಾಯಸ್ಥ ಮತದಾರರು ಮತ್ತು 1.3 ಲಕ್ಷ ಸಿಂಧಿ ಮತದಾರರು, 3.5 ಲಕ್ಷ ಮುಸ್ಲಿಮರು (ಪೂನಂ ಸಿನ್ಹಾ ಸಿಂಧಿ ಮತ್ತು ಪತಿ ಶತ್ರುಘ್ನ ಸಿನ್ಹಾ ಕಾಯಸ್ಥ) ಇರುವ ಹಿನ್ನಲೆಯಲ್ಲಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಪ್ರಯತ್ನ ನಡೆದಿದೆ ಎಂದು ಎಸ್ಪಿ ನಾಯಕರೊಬ್ಬರು ಹೇಳಿದ್ದಾರೆ.


ಇನ್ನೊಂದೆಡೆ ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಜಯ್ ಪಾಠಕ್ "ಲಕ್ನೋ ಯಾವಾಗಲೂ ಬಿಜೆಪಿ ಭದ್ರಕೋಟೆಯಾಗಿದ್ದು, ರಾಜನಾಥ್ ಸಿಂಗ್ ರಾಜ್ಯದ ರಾಜಧಾನಿಯಲ್ಲಿ ಅಭಿವೃದ್ಧಿಯನ್ನು ಖಾತರಿಪಡಿಸಿದ್ದಾರೆ ಮತ್ತು ಜನರೊಂದಿಗೆ ಬಾಂಧವ್ಯವನ್ನು ಹೊಂದಿದ್ದಾರೆ. ಆದ್ದರಿಂದ ಹೊರಗಿನಿಂದ ಬಂದಂತಹ ಅಭ್ಯರ್ಥಿಗೆ ಮತದಾರರು ಪ್ರಾಮುಖ್ಯತೆ ನೀಡುವುದಿಲ್ಲವೆಂದು ಹೇಳಿದರು.


ರಾಜ್ನಾಥ್ ಸಿಂಗ್ ಅವರು 2014 ರಲ್ಲಿ ಲಕ್ನೊ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಆಗ ಅವರು ಒಟ್ಟು 10,06,483 ಮತಗಳಲ್ಲಿ ಶೇ 55.7 ರಷ್ಟು ಮತಗಳನ್ನು ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಪಡೆದಿದ್ದರು.