ನವದೆಹಲಿ:ಕೇಂದ್ರ ಸರ್ಕಾರದ ಜನ ಧನ್ ಯೋಜನೆಯಲ್ಲಿ ಗ್ರಾಹಕರಿಗೆ ಆರ್ಥಿಕ ಸಹಾಯದ ಜೊತೆಗೆ ಅನೇಕ ವಿಶೇಷ ಸೌಲಭ್ಯಗಳು ಸಹ ಸಿಗುತ್ತವೆ. ಆ ವಿಶಿಷ್ಟ ಸೌಲಭ್ಯಗಳ ಬಗ್ಗೆ ನಿಮಗೆ ತಿಳಿದಿದೆಯೇ? ಹೌದು, ನಿಮ್ಮ ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೂ ಕೂಡ ನೀವು 5 ಸಾವಿರ ರೂ.ಗಳ ವರೆಗೆ ಹಣ ವಿಥ್ ಡ್ರಾ ಮಾಡಬಹುದು. ಸರ್ಕಾರದ ಈ ಯೋಜನೆ ಬಡವರಿಗೆ ಹೆಚ್ಚು ಲಾಭಕಾರಿಯಾಗಿದೆ. ಹಾಗಾದರೆ ಬನ್ನಿ ನೀವು ನಿಮ್ಮ ಖಾತೆಯಿಂದ ಈ 5000 ರೂ.ಗಳನ್ನು ಹೇಗೆ ಪಡೆಯಬಹುದು ಎಂಬುದನ್ನು ತಿಳಿಯೋಣ.


COMMERCIAL BREAK
SCROLL TO CONTINUE READING

ಸಿಗುತ್ತದೆ 5000 ಹೆಚ್ಚುವರಿ ಹಣ ವಿಥ್ ಡ್ರಾ ಮಾಡುವ ಅವಕಾಶ 
ಪ್ರಧಾನಿ ಜನ ಧನ್ ಖಾತೆಯಲ್ಲಿ ಗ್ರಾಹಕರಿಗೆ 5000 ರೂ.ಗಳ ಓವರ್‌ಡ್ರಾಫ್ಟ್ ಸೌಲಭ್ಯ ಸಿಗುತ್ತದೆ. ಇದಕ್ಕಾಗಿ ನಿಮ್ಮ ಪಿಎಂಜೆಡಿವೈ ಖಾತೆ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರಬೇಕು ಎಂಬುದು ಇದರ ಷರತ್ತು. ಓವರ್‌ಡ್ರಾಫ್ಟ್ ಸೌಲಭ್ಯದಡಿಯಲ್ಲಿ, ಖಾತೆದಾರನು ತನ್ನ ಖಾತೆಯಲ್ಲಿ ಹಣವಿಲ್ಲದಿದ್ದರೂ ಸಹ ಬ್ಯಾಂಕ್ ಖಾತೆಯಿಂದ ಹಣವನ್ನು ಹಿಂಪಡೆಯಬಹುದು.


ಆಧಾರ್ ಕಾರ್ಡ್ ಇರಲೇಬೇಕು
ಪ್ರಧಾನ್ ಮಂತ್ರಿ ಜನ ಧನ್ ಯೋಜನೆಯಲ್ಲಿ ಓವರ್‌ಡ್ರಾಫ್ಟ್ ಸೌಲಭ್ಯದ ಲಾಭ ಪಡೆಯಲು ಆಧಾರ್ ಕಾರ್ಡ್ ಹೊಂದಿರುವುದು ಅವಶ್ಯಕ. ತಮ್ಮ ಜನ್ ಧನ್ ಖಾತೆಯಲ್ಲಿ ಹಣವಿಲ್ಲದಿದ್ದರೂ ಕೂಡ ರೂ.5000 ವರೆಗೆ ಹಣವನ್ನು ವಿಥ್ ಡ್ರಾ ಮಾಡಬಹುದು ಎಂಬುದು ತುಂಬಾ ಕಡಿಮೆ ಖಾತೆದಾರರಿಗೆ ತಿಳಿದಿದೆ. ಅಷ್ಟೇ ಅಲ್ಲ ಇದಕ್ಕಾಗಿ ಅವರ ಆಧಾರ್ ಕಾರ್ಡ್ ಅವರ ಖಾತೆಗೆ ಲಿಂಕ್ ಆಗಿರಬೇಕು ಎಂಬುದೂ ಕೂಡ ಹಲವರಿಗೆ ತಿಳಿದಿಲ್ಲ. ಈ ಓವರ್ ಡ್ರಾಫ್ಟ್ ಸೌಕರ್ಯ ಪಡೆಯಲು ಇವೆರಡು ಲಿಂಕ್ ಆಗಿರುವುದು ಆವಶ್ಯಕವಾಗಿದೆ ಎಂಬುದನ್ನು ಮಾತ್ರ ಮರೆಯಬೇಡಿ.


ಯಾರಿಗೆ ಓವರ್ ಡ್ರಾಫ್ಟ್ ಸೌಲಭ್ಯ ಸಿಗುವುದಿಲ್ಲ
ಯಾರ ಜನ್-ಧನ್ ಖಾತೆ ಅವರ ಆಧಾರ್ ಸಂಖ್ಯೆಯ ಜೊತೆಗೆ ಲಿಂಕ್ ಆಗಿಲ್ಲವೋ ಅವರಿಗೆ ಈ ಓವರ್ ಡ್ರಾಫ್ಟ್ ಸೌಲಭ್ಯ ಸಿಗುವುದಿಲ್ಲ. ಈ ಯೋಜನೆಯಡಿ ಪ್ರತಿ ಕುಟುಂಬಕ್ಕೂ ಬ್ಯಾಂಕ್ ಖಾತೆ ಇರಬೇಕು ಎಂಬುದು ಪ್ರಧಾನಿ ಮೋದಿಯವರ ಉದ್ದೇಶ. ಜನ ಧನ್ ಯೋಜನೆ ಅಡಿಯಲ್ಲಿ, ನೀವು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ಖಾತೆಯನ್ನು ಸಹ ತೆರೆಯಬಹುದು.


6 ತಿಂಗಳು ನೀವು ನಿಮ್ಮ ಖಾತೆಯಲ್ಲಿ ಹಣ ಹೊಂದಿರಬೇಕು
ಈ ಸೌಲಭ್ಯದ ಲಾಭ ಪಡೆಯಲು, ಖಾತೆದಾರನು ಮೊದಲ 6 ತಿಂಗಳವರೆಗೆ ಖಾತೆಯಲ್ಲಿ ಸಾಕಷ್ಟು ಹಣವನ್ನು ಇಟ್ಟುಕೊಳ್ಳಬೇಕು ಮತ್ತು ಈ ಅವಧಿಯಲ್ಲಿ ಅವರು ತಮ್ಮ ಖಾತೆಯಿಂದ  ಕಾಲಕಾಲಕ್ಕೆ ವಹಿವಾಟು ನಡೆಸಿರಬೇಕು. ಅಂತಹ ಖಾತೆದಾರರಿಗೆ ರುಪೇ ಡೆಬಿಟ್ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಈ ಕಾರ್ಡ್ ಅನ್ನು ಬಳಸಿ ಖಾತೆದಾರರು ಓವರ್ ಡ್ರಾಫ್ಟ್ ಸೌಕರ್ಯದ ಲಾಭ ಪಡೆಯಬಹುದು.


ಜನ್ ಧನ್ ಖಾತೆಯ ಲಾಭ
ಮಿನಿಮಮ್ ಬ್ಯಾಲೆನ್ಸ್ ಅಗತ್ಯವಿಲ್ಲ
ಉಚಿತ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ
30000 ರೂಗಳವರೆಗೆ ಲೈಫ್ ಕವರ್ ಪಡೆಯಿರಿ
ದೇಶಾದ್ಯಂತ ಹಣ ವರ್ಗಾವಣೆ ಸೌಲಭ್ಯ
ಸರ್ಕಾರಿ ಯೋಜನೆಗಳ ಪ್ರಯೋಜನಗಳ ನೇರ ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತದೆ.
ವಿಮೆ, ಪಿಂಚಣಿ ಉತ್ಪನ್ನಗಳನ್ನು ಖರೀದಿಸುವುದು ಸುಲಭ
ಠೇವಣಿಗಳ ಮೇಲಿನ ಬಡ್ಡಿ
ಈ ಯೋಜನೆ ಎಲ್ಲಾ ಗ್ರಾಮೀಣ ಮತ್ತು ನಗರ ಜನರಿಗೆ ಲಭ್ಯವಿದೆ.


ಹೊಸ ಖಾತೆ ಹೇಗೆ ತೆರೆಯಬೇಕು?
ಒಂದು ವೇಳೆ ನೀವು ಹೊಸದಾಗಿ ಜನ ಧನ್ ಖಾತೆಯನ್ನು ತೆರೆಯಲು ಬಯಸಿದ್ದರೆ, ನಿಮ್ಮ ಹತ್ತಿರದ ಬ್ಯಾಂಕ್‌ಗೆ ಹೋಗಬೇಕು. ಇಲ್ಲಿ, ನೀವು ಜನ ಧನ್ ಖಾತೆ ಫಾರ್ಮ್ ಅನ್ನು ಭರ್ತಿ ಮಾಡಬೇಕು. ನಿಮ್ಮ ಎಲ್ಲ ವಿವರಗಳನ್ನು ಅದರಲ್ಲಿ ಭರ್ತಿ ಮಾಡಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಗ್ರಾಹಕರು ತಮ್ಮ ಹೆಸರು, ಮೊಬೈಲ್ ಸಂಖ್ಯೆ, ಬ್ಯಾಂಕ್ ಶಾಖೆಯ ಹೆಸರು, ಅರ್ಜಿದಾರರ ವಿಳಾಸ, ನಾಮಿನಿ, ವ್ಯವಹಾರ / ಉದ್ಯೋಗ ಮತ್ತು ವಾರ್ಷಿಕ ಆದಾಯ ಮತ್ತು ಅವಲಂಬಿತರ ಸಂಖ್ಯೆ, ಎಸ್‌ಎಸ್‌ಎ ಕೋಡ್ ಅಥವಾ ವಾರ್ಡ್ ಸಂಖ್ಯೆ, ಗ್ರಾಮ ಕೋಡ್ ಅಥವಾ ಟೌನ್ ಕೋಡ್ ಇತ್ಯಾದಿಗಳನ್ನು ಒದಗಿಸಬೇಕು.


ಈ ದಾಖಲೆಗಳನ್ನು ನೀಡುವುದು ಅವಶ್ಯಕ
ಪಿಎಂಜೆಡಿವೈ ವೆಬ್‌ಸೈಟ್ ಪ್ರಕಾರ, ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್ ಸಂಖ್ಯೆ, ಚುನಾವಣಾ ಆಯೋಗ ಹೊರಡಿಸಿದ ಮತದಾರರ ಗುರುತಿನ ಚೀಟಿ, ರಾಜ್ಯ ಸರ್ಕಾರಿ ಅಧಿಕಾರಿಯ ಸಹಿಯೊಂದಿಗೆ ಎಂಎನ್‌ಆರ್‌ಇಜಿಎ ಜಾಬ್ ಕಾರ್ಡ್ ಮುಂತಾದ ದಾಖಲೆಗಳ ಮೂಲಕ ನೀವು ನಿಮ್ಮ ಜನ ಧನ್ ಖಾತೆಯನ್ನು ತೆರೆಯಬಹುದು.