ನವದೆಹಲಿ: ಶಿವಸೇನೆ ಸಂಸದ ಅರವಿಂದ ಸಾವಂತ್ ನೈತಿಕ ಕಾರಣಗಳನ್ನು ಉಲ್ಲೇಖಿಸಿ ಹುದ್ದೆಯಿಂದ ಕೆಳಗಿಳಿದ ಕೆಲವೇ ಗಂಟೆಗಳ ನಂತರ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವಾಲಯದ ಹೆಚ್ಚುವರಿ ಉಸ್ತುವಾರಿ ನೀಡಲಾಯಿತು.


COMMERCIAL BREAK
SCROLL TO CONTINUE READING

ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಅರವಿಂದ್ ಸಾವಂತ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅಂಗೀಕರಿಸಿದ್ದಾರೆ. ಬಳಿಕ ಈಗಾಗಲೇ ಮಾಹಿತಿ ಮತ್ತು ಪ್ರಸಾರ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಎಂಬ ಎರಡು ಸಚಿವಾಲಯಗಳ ಜವಾಬ್ದಾರಿ ನಿರ್ವಹಿಸಿತ್ತಿರುವ ಪ್ರಕಾಶ್ ಜಾವಡೇಕರ್ ಅವರಿಗೆ ಭಾರಿ ಕೈಗಾರಿಕೆಗಳ ಸಚಿವಾಲಯವನ್ನು ಹಂಚಿಕೆ ಮಾಡಲಾಗಿದೆ.


ಮಹಾರಾಷ್ಟ್ರದಲ್ಲಿ ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ತಮ್ಮ ಪಕ್ಷ ಎನ್‌ಡಿಎಯಿಂದ ಹೊರನಡೆದ ನಂತರ ಶಿವಸೇನೆ ಸಂಸದ ಸೋಮವಾರ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.


"ನಾನು ಮೇ 30 ರಂದು ಕೇಂದ್ರ ಹೆವಿ ಇಂಡಸ್ಟ್ರೀಸ್ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಬಿಜೆಪಿ ತಮ್ಮ ಚುನಾವಣಾ ಪೂರ್ವದ ಭರವಸೆಗಳಿಂದ ಹಿಂದೆ ಸರಿದರು. ಲೋಕಸಭಾ ಚುನಾವಣೆಯ ಸಮಯದಲ್ಲಿ, ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಅಧಿಕಾರ ಹಂಚಿಕೆ ಸಮಾನವಾಗಿರುತ್ತದೆ ಎಂದು ಚರ್ಚಿಸಲಾಯಿತು. ಬಿಜೆಪಿ ಇದನ್ನು ಈಗ ನಿರಾಕರಿಸುತ್ತಿದ್ದಾರೆ "ಎಂದು ಅವರು ರಾಷ್ಟ್ರ ರಾಜಧಾನಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.


"ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಯಾಗಲಿರುವ ಕಾರಣ ಕೇಂದ್ರದಲ್ಲಿ ಮುಂದುವರಿಯುವುದು ನನಗೆ ನೈತಿಕವಾಗಿ ಸರಿಹೊಂದುವುದಿಲ್ಲ. ಹಾಗಾಗಿ ನನ್ನ ರಾಜೀನಾಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದ್ದೇನೆ" ಎಂದು ಅವರು ಹೇಳಿದರು.


[With ANI Inputs]