ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ
ಹದಿನೈದು ದಿನಗಳ ರಾಜಕೀಯ ಬಿಕ್ಕಟ್ಟಿನ ನಂತರ ಮಹಾರಾಷ್ಟ್ರವನ್ನು ಕೇಂದ್ರದ ಆಡಳಿತದಲ್ಲಿಡುವ ಸಚಿವ ಸಂಪುಟದ ಶಿಫಾರಸಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಬುಧವಾರ ಸಹಿ ಹಾಕಿದ್ದಾರೆ.
ನವದೆಹಲಿ: ಹದಿನೈದು ದಿನಗಳ ರಾಜಕೀಯ ಬಿಕ್ಕಟ್ಟಿನ ನಂತರ ಮಹಾರಾಷ್ಟ್ರವನ್ನು ಕೇಂದ್ರದ ಆಡಳಿತದಲ್ಲಿಡುವ ಸಚಿವ ಸಂಪುಟದ ಶಿಫಾರಸಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಬುಧವಾರ ಸಹಿ ಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ಯಾಬಿನೆಟ್ ಶಿಫಾರಸು ಮಾಡಿದ್ದು, ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರ ವರದಿಯನ್ನು ಅನುಸರಿಸಿ “ಮಹಾರಾಷ್ಟ್ರದ ಸರ್ಕಾರವನ್ನು ಸಂವಿಧಾನದ ಪ್ರಕಾರ ಮುಂದುವರಿಸಲಾಗುವುದಿಲ್ಲ” ಎಂದು ಉಲ್ಲೇಖಿಸಲಾಗಿದೆ.
ಇನ್ನು ಸರ್ಕಾರ ರಚಿಸಲು ಕೇವಲ 24 ಗಂಟೆ ಕಾಲಾವಕಾಶ ನೀಡಿದ್ದ ರಾಜ್ಯಪಾಲರ ವಿರುದ್ಧ ಈಗಾಗಲೇ ಸುಪ್ರೀಂ ಕೋರ್ಟ್‌ಗೆ ತೆರಳಿರುವ ಶಿವಸೇನೆ, ರಾಷ್ಟ್ರಪತಿ ಆದೇಶದ ವಿರುದ್ಧವೂ ಸುಪ್ರೀಂ ಕೋರ್ಟ್‌ಗೆ ಹೋಗುವುದಾಗಿ ಹೇಳಿದೆ. ಕಳೆದ ತಿಂಗಳ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷದೊಂದಿಗೆ ಕೈಜೋಡಿಸಿದ್ದ ಶಿವಸೇನೆ, ಮುಖ್ಯಮಂತ್ರಿಯ ಸ್ಥಾನವನ್ನು ಹಂಚಿಕೊಳ್ಳಬೇಕೆಂಬ ಬೇಡಿಕೆಗಳನ್ನು ಬಿಜೆಪಿ ತಿರಸ್ಕರಿಸಿದ ನಂತರ ಮೈತ್ರಿಯಿಂದ ಹೊರನಡೆದಿದೆ.
288 ಸದಸ್ಯರ ವಿಧಾನಸಭೆಯಲ್ಲಿ 105 ಸ್ಥಾನಗಳನ್ನು ಹೊಂದಿರುವ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಗೆ ರಾಜ್ಯಪಾಲ ಕೊಶ್ಯರಿ ಕಳೆದ ವಾರ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದರು, ಈ ಪ್ರಸ್ತಾಪವನ್ನು ತೆಗೆದುಕೊಳ್ಳಲು ಬಿಜೆಪಿ ನಿರಾಕರಿಸಿದಾಗ, ರಾಜ್ ಭವನವು ಉದ್ಧವ್ ಠಾಕ್ರೆ ನೇತೃತ್ವದ ಎರಡನೇ ದೊಡ್ಡ ಪಕ್ಷವಾದ ಶಿವಸೇನೆ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದರು.ಆದರೆ ಅದು ಕಾಂಗ್ರೆಸ್ ಹಾಗೂ ಎನ್ಸಿಪಿ ಬೆಂಬಲ ಪತ್ರ ಸಲ್ಲಿಸದ ಹಿನ್ನಲೆಯಲ್ಲಿ ರಾಜ್ಯಪಾಲರು ಶಿವಸೇನಾ ಬೇಡಿಕೆಯನ್ನು ತಿರಸ್ಕರಿಸಿ ನಂತರ ಎನ್ಸಿಪಿಗೆ ಆಹ್ವಾನ ನೀಡಿದರು.
ರಾಜ್ಯಪಾಲರ ಗಡುವಿನ ಪ್ರಕಾರ ಇಂದು ರಾತ್ರಿ 8.30ಕ್ಕೆ ಎನ್ಸಿಪಿ ಅವರಿಗೆ ಉತ್ತರ ನೀಡಬೇಕಾಗಿತ್ತು, ಅದಕ್ಕೂ ಮೊದಲೇ ಕೇಂದ್ರ ಸರ್ಕಾರ ಈಗ ರಾಜ್ಯಪಾಲರ ಶಿಫಾರಸ್ಸಿನ ಅನ್ವಯ ರಾಷ್ಟ್ರಪತಿ ಆಳ್ವಿಕೆಗೆ ಒಪ್ಪಿಗೆ ನೀಡಿದೆ.