ಎಲ್.ಕೆ ಅಡ್ವಾಣಿಗೆ ಜನ್ಮದಿನದ ಶುಭಾಶಯ ಕೋರಿದ ಪ್ರಧಾನಿ ಮೋದಿ

ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ 92 ನೇ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಅವರಿಗೆ ಶುಭಾಶಯ ಕೋರಿದ್ದಾರೆ.
ನವದೆಹಲಿ: ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ 92 ನೇ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಅವರಿಗೆ ಶುಭಾಶಯ ಕೋರಿದ್ದಾರೆ.
ಇಂದು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಅಡ್ವಾಣಿಯವರನ್ನು ಭೇಟಿ ಮಾಡಿದರು. ಅವರ ಹುಟ್ಟುಹಬ್ಬದ ಪ್ರಯುಕ್ತ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅಡ್ವಾಣಿಯವರನ್ನು 'ವಿದ್ವಾಂಸರ, ರಾಜಕಾರಣಿ ಮತ್ತು ಭಾರತದ ಅತ್ಯಂತ ಗೌರವಾನ್ವಿತ ನಾಯಕರಲ್ಲಿ ಒಬ್ಬರು" ಎಂದು ಬಣ್ಣಿಸಿದ್ದಾರೆ.
'ಅಡ್ವಾಣಿಜಿಗೆ ಸಾರ್ವಜನಿಕ ಸೇವೆಯು ಯಾವಾಗಲೂ ಮೌಲ್ಯಗಳ ಸಂಬಂಧವನ್ನು ಹೊಂದಿದೆ. ಅವರು ಒಮ್ಮೆಯೂ ತಮ್ಮ ಪ್ರಮುಖ ಸಿದ್ಧಾಂತದಲ್ಲಿ ರಾಜಿ ಮಾಡಿಕೊಂಡಿಲ್ಲ. ನಮ್ಮ ಪ್ರಜಾಪ್ರಭುತ್ವವನ್ನು ಕಾಪಾಡುವ ವಿಷಯದಲ್ಲಿ ಅವರು ಮುಂಚೂಣಿಯಲ್ಲಿದ್ದಂತವರು. ಸಚಿವರಾಗಿ ಅವರ ಆಡಳಿತ ಕೌಶಲ್ಯವನ್ನು ಸಾರ್ವತ್ರಿಕವಾಗಿ ಶ್ಲಾಘಿಸಲಾಗಿದೆ,' ಎಂದು ಪಿಎಂ ಮೋದಿ ಟ್ವೀಟ್ ಮಾಡಿದ್ದಾರೆ.
ಅಡ್ವಾಣಿ ಅವರು ಬಿಜೆಪಿಗೆ ಆಕಾರ ಮತ್ತು ಶಕ್ತಿಯನ್ನು ನೀಡಲು ಹಲವು ದಶಕಗಳಿಂದ ಶ್ರಮಿಸಿದ್ದಾರೆ. ಈ ವರ್ಷಗಳಲ್ಲಿ, ನಮ್ಮ ಪಕ್ಷವು ಭಾರತೀಯ ರಾಜಕಾರಣದ ಪ್ರಬಲ ಧ್ರುವವಾಗಿ ಹೊರಹೊಮ್ಮಿದ್ದರೆ, ಅದಕ್ಕೆ ಅದ್ವಾಣಿ ಜಿ ಅವರಂತಹ ನಾಯಕರು ಮತ್ತು ಅವರು ದಶಕಗಳಿಂದ ರೂಪಿಸಿದ ನಿಸ್ವಾರ್ಥ ಕಾರ್ಯಕರ್ತರು ಕಾರಣ ಎಂದು ಅವರು ಬರೆದುಕೊಂಡಿದ್ದಾರೆ.