ನವದೆಹಲಿ: ಬ್ಯಾಂಕಿಂಗ್ ವ್ಯವಸ್ಥೆಯನ್ನು ದೇಶದ ಪ್ರತಿಯೊಬ್ಬ ನಾಗರಿಕನ ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ಸ್ಥಾಪನೆಯಾಗಿರುವ ಭಾರತೀಯ ಅಂಚೆ ಇಲಾಖೆಯ ಇಂಡಿಯಾ ಪೋಸ್ಟ್ ಪೆಮೆಂಟ್ಸ್ ಬ್ಯಾಂಕ್'ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. 


COMMERCIAL BREAK
SCROLL TO CONTINUE READING

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಇದುವರೆಗೂ ಪೋಸ್ಟ್'ಮ್ಯಾನ್ ಮನೆಮನೆಗೆ ಅಂಚೆ ಪತ್ರಗಳನ್ನು ತಲುಪಿಸುವ ಕಾರ್ಯಕ್ಕೆ ಹೆಸರಾಗಿದ್ದರು. ಆದರೆ ಈಗ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನೂ ಅವರು ಮನೆ ಬಾಗಿಲಿಗೆ ತರಲಿದ್ದಾರೆ. ದೇಶದ ಎಲ್ಲಾ ಜನರಿಗೆ ಬ್ಯಾಂಕಿಂಗ್ ಸೌಕರ್ಯ ಒದಗಿಸುವುದು ಐಪಿಪಿಬಿ ಯೋಜನೆಯ ಉದ್ದೇಶವಾಗಿದೆ. ಹೀಗಾಗಿ "ಮನೆ ಮನೆಗೆ ನಮ್ಮ ಬ್ಯಾಂಕ್" ಎನ್ನುವ ಧ್ಯೇಯದೊಡನೆ ಇದುವರೆಗೆ ಬ್ಯಾಂಕಿಂಗ್ ಸೇವೆಯ ಸಂಪೂಣ ಲಾಭ ಪಡೆಯಲಾರದವರನ್ನು ಸಹ ಈ ಸೇವೆಯೊಳಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ನರೇಂದ್ರ ಮೋದಿ ಹೇಳಿದರು.


ಐಪಿಪಿಬಿ ದೇಶದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಲು ಸಹಾಯ ಮಾಡುವ ಇಲಾಖೆಯ ವಿಶಾಲವಾದ ನೆಟ್ವರ್ಕ್ ಅನ್ನು ನಿಯಂತ್ರಿಸುತ್ತದೆ. ಇದು ದೇಶದಾದ್ಯಂತ 650 ಶಾಖೆಗಳನ್ನು ಮತ್ತು 3250 ಆಕ್ಸಿಸ್ ಪಾಯಿಂಟ್'ಳನ್ನು ಹೊಂದಿದ್ದು, ದೇಶದಲ್ಲಿರುವ 1.55 ಲಕ್ಷ ಅಂಚೆ ಕಚೇರಿಗಳು ಡಿಸೆಂಬರ್ 31 ರೊಳಗೆ ಐಪಿಪಿಬಿ ವ್ಯವಸ್ಥೆಗೆ ಸಂಪರ್ಕ ಕಲ್ಪಿಸಲ್ಪಡುತ್ತವೆ. ಉಳಿತಾಯ ಮತ್ತು ಪ್ರಸ್ತುತ ಖಾತೆಗಳು, ಹಣ ವರ್ಗಾವಣೆ, ನೇರ ಲಾಭ ವರ್ಗಾವಣೆಗಳು, ಬಿಲ್ ಮತ್ತು ಯುಟಿಲಿಟಿ ಪಾವತಿಗಳು, ವ್ಯಾಪಾರಿ ಮತ್ತು ಉದ್ಯಮ ಸೇರಿದಂತೆ ಹಲವು ಸೇವೆಗಳನ್ನು ಈ ವ್ಯವಸ್ಥೆ ನೀಡಲಿದೆ ಎಂದು ಪ್ರಧಾನಿ ತಿಳಿಸಿದರು. 


ಮುಂದುವರೆದು ಮಾತನಾಡಿದ ಅವರು, ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಇದ್ದವರು ಯಾರೇ ಆದರೂ ಈ ಸೇವೆ ಪಡೆಯಲು ಅವಕಾಶವಿದೆ. ಕಾಗದ ರಹಿತ ಖಾತೆ, ವ್ಯವಹಾರ ನಡೆಸುವ ಬ್ಯಾಂಕ್ ಸೇವೆ ಇದಾಗಿದ್ದು ಇದರಲ್ಲಿ ಕನಿಷ್ಟ ಠೇವಣಿ ಎನ್ನುವ ಕಲ್ಪನೆ ಇಲ್ಲ ಎಂದು ಪ್ರಧಾನಿ ಮೋದಿ ತಿಳಿಸಿದರು.