ನವದೆಹಲಿ: ಭಾರತ ಮತ್ತು ಚೀನಾ ಗಡಿಯಲ್ಲಿ ಸೈನಿಕರ ಸಂಘರ್ಷ ಉಂಟಾದ ಬಳಿಕ ಹಾಗೂ ಗಡಿಯಲ್ಲಿ ಎರಡೂ ದೇಶಗಳ ಹೆಚ್ಚಿನ ಸೇನಾ ಬಲ ನಿಯೋಜನೆಗೊಂಡು ಉದ್ವಿಗ್ನತೆ ಹೆಚ್ಚಾದ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ದಿಢೀರನೆ ಗಡಿ ಭಾಗವಾದ ಲೇಹ್ ಗೆ ಭೇಟಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ.



COMMERCIAL BREAK
SCROLL TO CONTINUE READING

ಗಡಿ ಉದ್ವಿಗ್ನತೆ ಬಗ್ಗೆ ಜೂನ್ 5 ರಿಂದಲೂ ಭಾರತ ಮತ್ತು ಚೀನಾ ದೇಶಗಳ ಸೇನಾ ಅಧಿಕಾರಿಗಳ ನಡುವೆ ಮಾತುಕತೆ ನಡೆಯುತ್ತಲೇ ಇದೆ. ಜೊತೆಗೆ ಜೂನ್ 15ರಂದು ಗಡಿಯಲ್ಲಿ ಎರಡೂ ದೇಶಗಳ ಸೈನಿಕರ ನಡುವೆ ಸಂಘರ್ಷವಾಗಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಇನ್ನೂ ಕೆಲವರು ಗಾಯಗೊಂಡಿದ್ದರು. ಇದಾದ ಬಳಿಕ ಎರಡೂ ದೇಶಗಳ ವಿದೇಶಾಂಗ ಇಲಾಖಾ ಮಟ್ಟದ ಮಾತುಕತೆ ಕೂಡ ನಡೆದಿತ್ತು. ಆದರೂ ಪರಿಸ್ಥಿತಿ ತಿಳಿಗೊಂಡಿರಲಿಲ್ಲ. ಹೀಗಾಗಿ ಪರಿಸ್ಥಿತಿ ಅವಲೋಕಿಸಲು ಇಂದು ಪ್ರಧಾನಿ ಮೋದಿ ಅಚಾನಕ್ ಭೇಟಿಕೊಟ್ಟಿದ್ದಾರೆ.



ಯಾವುದೇ ಸುಳಿವು ನೀಡದೆ ಬೆಳಿಗ್ಗೆ ಲೇಹ್ ಗೆ ಬಂದಿಳಿದ ಅವರು ಮೊದಲಿಗೆ ಸೈನಿಕರ ಕುಶಲೋಪಹರಿ ವಿಚಾರಿಸಿದರು. ಬಳಿಕ ಅಧಿಕಾರಿಗಳ ಜೊತೆ ಗಡಿ ಉದ್ವಿಗ್ನತೆ ಬಗ್ಗೆ ಸಮಾಲೋಚನೆ ನಡೆಸಿದರು.


ವಾಸ್ತವವಾಗಿ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೇಹ್ ಮತ್ತು ಲಡಾಖ್ ಗೆ ಭೇಟಿ ನೀಡಬೇಕಿತ್ತು‌. ಕಡೆಗಳಿಗೆಯಲ್ಲಿ ರಾಜನಾಥ್ ಸಿಂಗ್ ತಮ್ಮ ಪ್ರವಾಸವನ್ನು ಮೊಟಕುಗೊಳಿಸಿದರು. ರಾಜನಾಥ್ ಸಿಂಗ್ ಅನುಪಸ್ಥಿತಿಯಲ್ಲಿ ಚೀಫ್ ಡಿಫೆನ್ಸ್‌ ಆಫ್ ಸ್ಟಾಫ್ ಬಿಪಿನ್ ರಾವತ್ ಭೇಟಿ‌ಕೊಟ್ಟಿದ್ದರು. ಬಳಿಕ ನರೇಂದ್ರ ಮೋದಿ ಕೂಡ ಹಠಾತ್ ಭೇಟಿ ನೀಡಿದ್ದಾರೆ.